ಶಿರಸಿ: ವಿಧಾನಸಭಾ ಸ್ಪೀಕರ್ ಆಗಿ ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಹಿರಿತನವನ್ನು ಕಂಡು ಪಕ್ಷ ಈ ಹುದ್ದೆ ನೀಡಿದೆ ಎಂದು ಹೇಳಲಾಗಿದ್ದರೂ ಸಚಿವ ಸ್ಥಾನ ತಪ್ಪಿಸಲು ಸ್ಪೀಕರ್ ಹುದ್ದೆ ನೀಡಿ ಕೈತೊಳೆದುಕೊಂಡಿದೆ ಎಂಬುದು ಪಕ್ಷದ ಒಳಗಿನ ಆಂತರಿಕ ಮಾತಾಗಿದೆ.
ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿ, ಕಳೆದ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದ ಅನುಭವವಿದ್ದ ಶಾಸಕ ಕಾಗೇರಿಗೆ ಸಚಿವ ಸ್ಥಾನವನ್ನು ನೀಡುವುದು ಅನಿವಾರ್ಯವಾಗಿತ್ತು. ಆದರೆ ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಸೇರಿ ಮಂತ್ರಿ ಆಗುತ್ತಾರೆ ಎಂಬ ವದಂತಿಯಿರುವ ಕಾರಣ ಅಕ್ಕಪಕ್ಕದ ಕ್ಷೇತ್ರದ ಬ್ರಾಹ್ಮಣ ಸಮುದಾಯದ ಶಾಸಕರಿಗೂ ಮಂತ್ರಿ ಸ್ಥಾನ ನೀಡುವುದು ಸಾಧ್ಯವಿಲ್ಲ ಎಂದು ಮನಗಂಡು ಕಾಗೇರಿಯವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸದ್ಯ ಅನರ್ಹರಾಗಿರುವ ಮಾಜಿ ಶಾಸಕ ಹೆಬ್ಬಾರ್ ಸುಪ್ರೀಂ ಕೋರ್ಟ್ನಲ್ಲಿ ಜಯ ಸಾಧಿಸಿದಲ್ಲಿ ಬಿಜೆಪಿಗೆ ಹಾರಿ, ಮಂತ್ರಿಯಾಗುವ ಲೆಕ್ಕಾಚಾರ ಹೊಂದಿದ್ದಾರೆ ಎನ್ನುವ ಮಾತಿದೆ. ಹೆಬ್ಬಾರ್ ಸುಪ್ರೀಂನಲ್ಲಿ ಜಯ ಸಾಧಿಸಿ ಬಂದಲ್ಲಿ ಅವರನ್ನೇ ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡುವ ಉದ್ದೇಶದಿಂದ ಬಿಜೆಪಿ ಹೈಕಾಮಾಂಡ್ ಹಿರಿಯ ಶಾಸಕ ಕಾಗೇರಿಗೆ ಸ್ಪೀಕರ್ ಸ್ಥಾನ ನೀಡಿ ಬಾಯಿ ಮುಚ್ಚಿಸಲಾಗಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ.
ಸ್ಪೀಕರ್ ಹುದ್ದೆಗೆ ಶಾಸಕ ಕಾಗೇರಿ ಆಯ್ಕೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ರಾಜಕೀಯ ಚದುರಂಗದಾಟದಲ್ಲಿ ಹೆಬ್ಬಾರ್ ಮೇಲುಗೈ ಸಾಧಿಸಿದರು ಎಂಬ ಮಾತು ಕೇಳಿ ಬರುತ್ತಿದೆ.