ಕಾರವಾರ: ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ತಾವು ಅಪಘಾತಕ್ಕೊಳಗಾಗುವುದಲ್ಲದೆ, ಇನ್ನೊಬ್ಬರ ಜೀವಕ್ಕೂ ಕುತ್ತು ತರುವವರ ವಿರುದ್ಧ ಉತ್ತರ ಕನ್ನಡ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು, ದಂಡದ ಜೊತೆಗೆ ಲೈಸನ್ಸ್ನ್ನು ರದ್ದು ಮಾಡುವ ಮೂಲಕ ಮದ್ಯ ಪ್ರಿಯರ ನಶೆ ಇಳಿಸಲು ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ, ಇದೇ ಕಾರಣಕ್ಕೆ ಅಪಘಾತಗಳು ಹೆಚ್ಚುತ್ತಿರುವ ಮಾಹಿತಿ ಕಲೆಹಾಕಿರುವ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ರಸ್ತೆ ಸುರಕ್ಷಾ ಕಾನೂನು ಬಿಗಿಗೊಳಿಸುವ ಮೂಲಕ ಕುಡಿದು ವಾಹನ ಚಲಾಯಿಸುವವರಿಗೆ ನಡು ರಸ್ತೆಯಲ್ಲಿಯೇ ನಶೆ ಇಳಿಸುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸೂಚನೆಯಂತೆ ಜಿಲ್ಲೆಯಾದ್ಯಂತ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ವಾಹನ ಚಾಲಕರನ್ನು ಪರೀಕ್ಷೆಗೊಳಪಡಿಸಿ ಕುಡಿದಿರುವುದು ಖಚಿತಗೊಂಡಲ್ಲಿ ದಂಡ ಪ್ರಯೋಗ ಮಾಡುತ್ತಿದ್ದಾರೆ. ಅಲ್ಲದೇ, ಇತರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧವು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಇದರಿಂದ ಕುಡಿದು ವಾಹನ ಚಲಾಯಿಸಿದ ಪ್ರಕರಣಗಳ ಪೈಕಿ 2017ರಲ್ಲಿ 312 ಮತ್ತು 2018ರಲ್ಲಿ 403 ದಾಖಲಾಗಿದ್ದರೆ, ಈ ಬಾರಿ 5 ತಿಂಗಳಲ್ಲಿಯೇ ಬರೊಬ್ಬರಿ 370 ಪ್ರಕರಣಗಳು ದಾಖಲಿಸಲಾಗಿವೆ. ಜಿಲ್ಲೆಯ ಎಲ್ಲೆಡೆ ರಸ್ತೆಗಳಲ್ಲಿ ನಿಂತು ಕೈ ಅಡ್ಡ ಹಾಕುತ್ತಿರುವ ಪೊಲೀಸರು, ಕಾನೂನು ಉಲ್ಲಂಘಿಸುವವರ ವಿರುದ್ಧ ಸಮರ ಮುಂದುವರಿಸಿದ್ದಾರೆ. ಮೋಜು ಮಸ್ತಿಗಾಗಿ ಕುಡಿದು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಗೋವಾ ಗಡಿ ಸಮೀಪವಿರುವುದರಿಂದ ಕಡಿಮೆ ಬೆಲೆಗೆ ಮದ್ಯ ಸಿಗುವ ಕಾರಣ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚು. ಇದರಿಂದ ತಾವು ಅಪಘಾತಕ್ಕೊಳಗಾಗುವುದಲ್ಲದೆ, ಇತರರ ಜೀವಕ್ಕೂ ಅಪಾಯ ಉಂಟಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಕುಡುಕ ಚಾಲಕರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರಾದ ರವಿ ಗೌಡ.
ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕುಡಿದು ವಾಹನ ಚಲಾಯಿಸುವವರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 370 ಪ್ರಕರಣ ದಾಖಲಾಗಿದ್ದು, ಎಲ್ಲ ಚಾಲಕರ ವಾಹನ ಚಾಲನಾ ಪರವಾನಗಿ ರದ್ದುಪಡಿಸಲು ಆರ್ಟಿಒ ಅವರಿಗೆ ವರದಿ ಸಲ್ಲಿಸಲಾಗಿದೆ. ಜನರು ಜಾಗೃತರಾಗಬೇಕು. ಕುಡಿದು ವಾಹನ ಚಲಾಯಿಸುವುದು ತಪ್ಪು. ಹೀಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್.