ಭಟ್ಕಳ (ಉತ್ತರ ಕನ್ನಡ): ಲಾಕ್ಡೌನ್ ಸಡಿಲಿಕೆಯಾದ ಬೆನ್ನಲ್ಲಿಯೇ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಳೆ ಮುಂಗಾರಿಗಿಂತ ಮೊದಲೇ ಆರಂಭವಾದ ಹಿನ್ನೆಲೆಯಲ್ಲಿ ಅನ್ನದಾತ ಭತ್ತ ನಾಟಿ ಕಾರ್ಯದಲ್ಲಿ ತೊಡಗಿದ್ದಾನೆ.
ತಾಲೂಕಿನಲ್ಲಿ ಇಲ್ಲಿವರೆಗೆ ಒಟ್ಟು 1023.2 ಮಿ. ಮೀ. ಮಳೆ ಸುರಿದಿದೆ. ಸಾಕಷ್ಟು ಕಡೆಗಳಲ್ಲಿ ಭತ್ತದ ನಾಟಿ ಕಾರ್ಯ ಆರಂಭಗೊಂಡಿದೆ, ತಾಲೂಕಿನಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ತಯಾರಿ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಅಂದಾಜು 3,500 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿತ್ತು.
ಕಳೆದ ವರ್ಷದ ಪರಿಹಾರಕ್ಕೆ ಕಾದು ಕುಳಿತ ರೈತ :
ಕಳೆದ ವರ್ಷ ಸುರಿದ ಭಾರಿ ಮಳೆಯ ಪರಿಣಾಮ ನೆರೆ ಹಾವಳಿ ಉಂಟಾಗಿ ರೈತರಿಗೆ ಭಾರಿ ನಷ್ಟ ಅನುಭವಿಸಿದ್ದರು. ಈ ವೇಳೆ ಸರ್ಕಾರ ಕೃಷಿ ಭೂಮಿ ಹಾನಿಯ ಸಮೀಕ್ಷೆ ಮಾಡುವಂತೆ ಸೂಚನೆ ನೀಡಿದ್ದು, ಅದರಂತೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯಲ್ಲಿ ವರದಿ ನೀಡಿದೆ. ಆದರೆ, ಪರಿಹಾರದ ಮೊತ್ತ ಮಾತ್ರ ಇನ್ನೂ ಸಿಕ್ಕಿಲ್ಲ ಅನ್ನೋದು ರೈತರ ಕೊರಗು.