ಕಾರವಾರ: ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘವಾಗಿ ಕರ್ನಾಟಕದ ಕರಾವಳಿ-ಮಲೆನಾಡನ್ನಾಳಿದ 'ಕಾಳು ಮೆಣಸಿನ ರಾಣಿ' ಎಂದೇ ಸುಪ್ರಸಿದ್ಧರಾಗಿದ್ದ ಚೆನ್ನಭೈರಾದೇವಿಯ ಜೀವನಗಾಥೆ ಎಲ್ಲರಿಗೂ ಸ್ಫೂರ್ತಿದಾಯಕ.
ಈ ನಿಟ್ಟಿನಲ್ಲಿ ಯುವಜನಾಂಗಕ್ಕೆ ರಾಣಿಯ ಜೀವನದ ಯಶೋಗಾಥೆಯನ್ನು ತಿಳಿಸಲು ಹೊನ್ನಾವರದ ಕಾಸರಕೋಡದಲ್ಲಿ 'ರಾಣಿ ಚೆನ್ನಭೈರಾದೇವಿ ಥೀಮ್ ಪಾರ್ಕ್' ನಿರ್ಮಾಣಕ್ಕೆ ಯೋಜನೆ ರೂಪುಗೊಂಡಿದೆ.
ಕಾಳು ಮೆಣಸಿನ ರಾಣಿ ಎಂದಿದ್ದ ಪೋರ್ಚುಗೀಸರು: ಕ್ರಿ.ಶ.1552 ರಿಂದ 1606ರವರೆಗೆ ಸುಮಾರು 54 ವರ್ಷಗಳವರೆಗೆ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಅನೇಕ ಭಾಗಗಳನ್ನು ಸಮರ್ಥವಾಗಿ ಆಳಿದ್ದ ರಾಣಿ ಚೆನ್ನಭೈರಾದೇವಿ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪವನ್ನ ಕೇಂದ್ರವಾಗಿರಿಸಿ ಆಳ್ವಿಕೆ ನಡೆಸುತ್ತಿದ್ದ ಚೆನ್ನಭೈರಾದೇವಿ ಯುದ್ಧ ಮಾಡಿ ಸೋತ ಪೋರ್ಚುಗೀಸರಿಂದಲೇ 'ಕಾಳು ಮೆಣಸಿನ ರಾಣಿ' ಎಂಬ ಹೆಗ್ಗಳಿಕೆ ಪಡೆದಿದ್ದರು.
ಪಾರ್ಕ್ ನಿರ್ಮಾಣಕ್ಕೆ ರೂಪುರೇಷೆ ಸಿದ್ಧ: ಯಾವ ರಾಜನಿಗಿಂತಲೂ ತಾನು ಕಡಿಮೆಯಿಲ್ಲವೆಂಬಂತೆ ಪೋರ್ಚುಗೀಸರು ಅದೆಷ್ಟೋ ಬಾರಿ ದಾಳಿ ನಡೆಸಿದರೂ ಒಮ್ಮೆಯೂ ಸೋಲನ್ನೊಪ್ಪದೆ ಪರಾಕ್ರಮ ಮೆರೆದಿದ್ದವಳು ರಾಣಿ ಚೆನ್ನಭೈರಾದೇವಿ. ಆದರೆ ಈ ರಾಣಿಯ ಕುರಿತು ಇತಿಹಾಸಕಾರರು ಹೆಚ್ಚಿನ ಬೆಳಕು ಚೆಲ್ಲದ ಕಾರಣ ಇವರ ಕುರಿತು ಅನೇಕರಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಗೊಂಡಿದೆ.
ಕರಾವಳಿಯಲ್ಲಿ ಅಂದು ಬೆಳೆಯುತ್ತಿದ್ದ ಕಾಳು ಮೆಣಸಿನ ವ್ಯಾಪಾರದಿಂದಾಗಿ ಪ್ರಸಿದ್ಧಿ ಪಡೆದಿದ್ದ ರಾಣಿ ಚೆನ್ನಭೈರಾದೇವಿ, ರಾಷ್ಟ್ರಾಭಿಮಾನ, ಶೌರ್ಯ ಮತ್ತು ಚಾಣಾಕ್ಷತನದಿಂದ ಈಗಿನ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳನ್ನೊಳಗೊಂಡಂತೆ ತನ್ನ ವ್ಯಾಪ್ತಿಯನ್ನು ಹೊಂದಿ ಸುದೀರ್ಘ ಆಡಳಿತ ನಡೆಸಿದ್ದಳು. ಆದರೆ ನೆರೆಯ ಕೆಳದಿಯ ವಂಶಸ್ಥರಿಂದಲೇ ರಾಣಿ ಸೋಲನ್ನನುಭವಿಸುವಂತಾಯಿತು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.
ಲೇಖಕ ಡಾ.ಗಜಾನನ ಶರ್ಮ ಅವರು ಚೆನ್ನಭೈರಾದೇವಿಯ ಕುರಿತು ಸಂಶೋಧಿಸಿ, ಕ್ಷೇತ್ರಕಾರ್ಯ ನಡೆಸಿ ಹೊರತಂದ 'ಚೆನ್ನಭೈರಾದೇವಿ: ಕರಿಮೆಣಸಿನ ರಾಣಿಯ ಅಕಳಂಕ ಚರಿತೆ' ಕಾದಂಬರಿಯಲ್ಲಿ ರಾಣಿಯ ಕುರಿತಾದ ರೋಚಕ ಕಥೆಗಳನ್ನು ಬಿಚ್ಚಿಟ್ಟಿದ್ದಾರೆ.
ಚೆನ್ನಭೈರಾದೇವಿಯ ಪರಾಕ್ರಮಗಳ ಬಗ್ಗೆ ಅರಿತ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿಶೇಷ ಆಸಕ್ತಿವಹಿಸಿ, ರಾಣಿಯ ಇತಿಹಾಸ, ಪರಾಕ್ರಮ ತಿಳಿಸುವ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮಿತಿಯೊಂದನ್ನು ರಚಿಸಿ, ನೀಲನಕ್ಷೆಯನ್ನೂ ಸಿದ್ಧಪಡಿಸಿದ್ದು, ಜನಪ್ರತಿನಿಧಿಗಳು, ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಈ ಮೂಲಕ ಚೆನ್ನಭೈರಾದೇವಿ ಥೀಮ್ ಪಾರ್ಕ್ನ್ನು ಪ್ರವಾಸಿ ತಾಣದ ರೀತಿಯಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು, ಆದಷ್ಟು ಶೀಘ್ರದಲ್ಲಿ ಇದನ್ನು ರೂಪಿಸುವ ಮೂಲಕ ಇಂದಿನ ಯುವಕರು, ಯುವತಿಯರಿಗೆ ರಾಣಿಯ ಕುರಿತು ತಿಳಿಸುವಂತಾಗಲಿ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಇದನ್ನೂ ಓದಿ: ವಿಡಿಯೋ ನೋಡಿ: ಕಾರವಾರದಲ್ಲಿ ಮೆಲ್ಲಗೆ ರಸ್ತೆ ದಾಟಿದ ಭಾರಿ ಗಾತ್ರದ ಹೆಬ್ಬಾವು