ಶಿರಸಿ: ಸಾಗರಮಾಲಾ ಯೋಜನೆ ಅಥವಾ ಇನ್ನಾವುದೇ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಶಾಸಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸಲಹೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ಹಲವು ದೊಡ್ಡ ದೊಡ್ಡ ಯೋಜನೆಗಳು ಅನುಷ್ಠಾನಗೊಂಡಿದ್ದು, ಆಗೆಲ್ಲಾ ಪ್ರತಿಭಟನೆಗಳು ನಡೆದಿವೆ. ಪ್ರತಿಭಟಿಸುವುದು ಪ್ರಜಾಪ್ರಭುತ್ವ ನೀಡಿರುವ ಹಕ್ಕಾಗಿದೆ. ಹಾಗಾಗಿ ಅದನ್ನು ಹತ್ತಿಕ್ಕುವ ಬದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.
ಸಾಗರಮಾಲಾ ಯೋಜನೆಗೆ ನಮ್ಮ ಅವಧಿಯಲ್ಲಿ ಶಂಕು ಸ್ಥಾಪನೆ ಆಗಿದ್ದರೂ ಸಹ ಅದರ ಕುರಿತು ರಾಜ್ಯ ಅಥವಾ ಕೇಂದ್ರದ ಅಧಿಕಾರಿಗಳು ನನ್ನೊಂದಿಗೆ ಚರ್ಚೆ ನಡೆಸಿಲ್ಲ. ಅದರ ಕುರಿತು ನನಗೆ ಮಾಹಿತಿಯಿಲ್ಲ ಎಂದ ದೇಶಪಾಂಡೆ, ಯೋಜನೆಯ ಕುರಿತಂತೆ ಸಂಬಂಧಿಸಿದ ಸಚಿವರು ಜಿಲ್ಲೆಗೆ ಆಗಮಿಸಿ ಜನರ ಕಷ್ಟ-ನಷ್ಟಗಳನ್ನು ಕೇಳಬೇಕು. ಅವರಿಗೆ ಸ್ಪಂದಿಸಿ, ಮನವೊಲಿಸುವ ಮೂಲಕ ಯೋಜನೆ ಅನುಷ್ಠಾನ ಮಾಡಬೇಕು ಎಂದು ಹೇಳಿದರು.