ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಅಭಿಯಾನದ ಕಾವು ಜೋರಾಗಿದೆ. ಜಿಲ್ಲೆಯ ಕೆಲ ಉತ್ಸಾಹಿ ಯುವಕರು ಕೈಗೆತ್ತಿಕೊಂಡಿದ್ದ ಟ್ವಿಟರ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಜನರೂ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಇದೀಗ ಜನಪ್ರತಿನಿಧಿಗಳ ಮೇಲೂ ಅಭಿಯಾನ ಪರಿಣಾಮ ಬೀರಿದ್ದು, ಸುಸಜ್ಜಿತ ಆಸ್ಪತ್ರೆಗಾಗಿ ಅವರೂ ಸಹ ಇದೀಗ ದನಿಗೂಡಿಸುತ್ತಿದ್ದಾರೆ. ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಲಿರುವ ಸಿಎಂ ಖುದ್ದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸುತ್ತಾರೆ ಎನ್ನುವ ಭರವಸೆಯ ಮಾತುಗಳು ಕೇಳಿಬಂದಿವೆ.
ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಚಿಕಿತ್ಸೆಗೆಂದು ರೋಗಿಯನ್ನ ಕರೆದೊಯ್ಯುತ್ತಿದ್ದ ಹೊನ್ನಾವರದ ಕುಟುಂಬವೊಂದು ಮಾರ್ಗಮದ್ಯೆಯೇ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಘಟನೆ ನಡೆದಿತ್ತು. ಈ ಪ್ರಕರಣ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದು, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದಿರೋದೆ ಇಂತಹದ್ದೊಂದು ದುರ್ಘಟನೆಗೆ ಕಾರಣ ಎನ್ನುವ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗಿತ್ತು. ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೂಗು ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಕೇಳಿಬರುತ್ತಿದ್ದು, ಜನರಿಂದ ಬೇಡಿಕೆ ಇದ್ದರೂ ಸಹ ಸರ್ಕಾರದಿಂದ ಮಾತ್ರ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ.
ಈ ನಿಟ್ಟಿನಲ್ಲಿ ಈ ಬಾರಿ ಶತಾಯಗತಾಯ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆಯನ್ನ ಮಂಜೂರಿಸಲೇಬೇಕು ಎಂದು ಜನರು ಸಹ ಪಣತೊಟ್ಟಿದ್ದು, ಅಭಿಯಾನವೊಂದನ್ನ ಕೈಗೆತ್ತಿಕೊಂಡಿದ್ದಾರೆ. ಇದಕ್ಕೆ ಇಡೀ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹಲವಾರು ಸಂಘಟನೆಗಳು ಸಹ ಕೈಜೋಡಿಸಿದ್ದವು. ಈ ಬೆಳವಣಿಗೆಯ ನಡುವೆಯೇ ಇಂದು ಜಿಲ್ಲೆಯ ಜನಪ್ರತಿನಿಧಿಗಳು ಸಾಲು ಸಾಲಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತರುವ ಮಾತನ್ನಾಡಿದ್ದಾರೆ.
ಆಸ್ಪತ್ರೆ ಮಂಜೂರಿಯನ್ನ ಘೋಷಿಸಲಿದ್ದಾರೆ: ಕಾರವಾರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹಿಂದೆಯೇ ಬೇಡಿಕೆ ಸಲ್ಲಿಸಿದ್ದು, ಕೊರೊನಾ ಕಾರಣದಿಂದಾಗಿ ಮಂಜೂರಿ ತಡವಾಗಿದೆ. ಅಗಸ್ಟ್ ತಿಂಗಳಲ್ಲಿ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡುವವರಿದ್ದು, ಖುದ್ದು ಅವರೇ ಆಸ್ಪತ್ರೆ ಮಂಜೂರಿಯನ್ನ ಘೋಷಿಸಲಿದ್ದಾರೆ ಎಂದಿದ್ದಾರೆ.
ಜನರ ಬೇಡಿಕೆ ಈಡೇರಿಸುವ ಭರವಸೆ ಇದೆ: ಇನ್ನು ಈ ಹಿಂದೆ ಬಿ. ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗಲೇ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆ ಇದ್ದು, ನನ್ನ ಮೊದಲ ಬೇಡಿಕೆ ಸಹ ಅದೇ ಆಗಿತ್ತು. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲೂ ಸಹ ಇದೇ ಬೇಡಿಕೆಯನ್ನ ಇರಿಸಿದ್ದು, ಅವರು ಜಿಲ್ಲೆಯ ಜನರ ಬೇಡಿಕೆ ಈಡೇರಿಸುವ ಭರವಸೆ ಇದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಸ್ಪಂದಿಸಿರಲಿಲ್ಲ: ಇನ್ನು 2019 ರಿಂದಲೂ ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವ ಅಭಿಯಾನ ನಡೆಯುತ್ತಿದ್ದು, ಇದುವರೆಗೆ ಯಾವುದೇ ಜನಪ್ರತಿನಿಧಿಗಳು ಇದಕ್ಕೆ ಸ್ಪಂದಿಸಿರಲಿಲ್ಲ. ಆದರೆ ಇದೀಗ ಸಭಾಧ್ಯಕ್ಷ, ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಹ ಸದ್ಯದಲ್ಲೇ ಸುಸಜ್ಜಿತ ಆಸ್ಪತ್ರೆ ಮಂಜೂರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ಭರವಸೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರು ಕೊಟ್ಟ ಭರವಸೆಯಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ : ಸಿದ್ದರಾಮಯ್ಯ ಅಮೃತ ಮಹೋತ್ಸವದಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ.. ಸತೀಶ್ ಜಾರಕಿಹೊಳಿ