ಕಾರವಾರ: ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಕಾರಣ ಗಂಭೀರ ಅನಾರೋಗ್ಯಕ್ಕೆ ತುತ್ತಾದವರು ಜೀವ ಉಳಿಸಿಕೊಳ್ಳಲು ಪಕ್ಕದ ರಾಜ್ಯ, ಜಿಲ್ಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದೆ. ಆದರೆ ಇದೀಗ ಕೊರೊನಾ ಕಾರಣಕ್ಕೆ ಅಕ್ಕ ಪಕ್ಕದವರೂ ಕೂಡ ಜಿಲ್ಲೆಯ ಜನರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದು, ಜನ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಒಟ್ಟು 12 ತಾಲೂಕುಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆ ರಾಜ್ಯದ ಅತೀ ದೊಡ್ಡ ಜಿಲ್ಲೆಗಳಲ್ಲಿ ಒಂದು. ಆದರೆ, ಜಿಲ್ಲೆಯ ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇನ್ನು ಕೂಡ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಪ್ರಮುಖವಾಗಿ, ಜನರ ಜೀವ ಉಳಿಸಿಕೊಳ್ಳಲು ಬೇಕಾಗಿರುವ ಒಂದು ಸುಸಜ್ಜಿತ ಆಸ್ಪತ್ರೆ ಕೂಡ ಜಿಲ್ಲೆಯಲ್ಲಿ ಇಲ್ಲ. ಜಿಲ್ಲೆಯ ಜನರು ಈ ಹಿಂದಿನಿಂದಲೂ ಪಕ್ಕದ ಗೋವಾ, ಹುಬ್ಬಳ್ಳಿ, ಮಂಗಳೂರು, ಮಣಿಪಾಲ ಮತ್ತು ಶಿವಮೊಗ್ಗದ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಅಪಘಾತದ ತುರ್ತು ಚಿಕಿತ್ಸೆ ಇಲ್ಲವೇ, ಗಂಭೀರ ಕಾಯಿಲೆಗೊಳಗಾದವರು ನೂರಾರು ಕಿ.ಮೀ ದೂರದ ಈ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ.
ಪಕ್ಕದ ಜಿಲ್ಲೆ, ರಾಜ್ಯಗಳ ಆಸ್ಪತ್ರೆಗಳು ಕೂಡ ವಿವಿಧ ಯೋಜನೆಗಳನ್ನು ಪರಿಚಯಿಸಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದವು. ಜನ ಕೂಡ ಜೀವ ಉಳಿಸಿಕೊಳ್ಳಲು ಅನಿವಾರ್ಯ ಕಾರಣದಿಂದಾಗಿ ಕಷ್ಟವಾದರೂ ಇಂತಹ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಆದರೆ, ಆವರಿಸಿಕೊಂಡ ಬಳಿಕ, ಅಕ್ಕ ಪಕ್ಕದ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಜಿಲ್ಲೆಯ ಜನರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಲಾಗುತ್ತಿದೆ. ಒಂದೊಮ್ಮೆ ಚಿಕಿತ್ಸೆ ಕೊಡಿಸಬೇಕೆಂದರೂ ಉನ್ನತ ವ್ಯಕ್ತಿಗಳು,ಜನ ಪ್ರತಿನಿಧಿಗಳಿಂದ ಒತ್ತಡ ಹೇರಬೇಕಾಗಿದೆ. ಅಷ್ಟೇ ಅಲ್ಲದೆ ಚಿಕಿತ್ಸೆ ವೆಚ್ಚ ಕೂಡ ದುಪ್ಪಟ್ಟು ಪಡೆಯಲಾಗುತ್ತಿದೆ. ಇದು ಜಿಲ್ಲೆಯ ಬಡ ಜನರು ಚಿಕಿತ್ಸೆ ಪಡೆಯಲಾಗದೆ ಪರದಾಡುವಂತೆ ಮಾಡಿದೆ.
ಕಾರವಾರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಗೊಂಡಿದೆಯಾದರೂ ಕೇವಲ ಲೆಕ್ಕಕ್ಕೆ ಮಾತ್ರ ಎನ್ನುವಂತಾಗಿದೆ. ಉಳಿದಂತೆ ಹೇಳಿಕೊಳ್ಳುವಂತಹ ಯಾವುದೇ ಉತ್ತಮ ಖಾಸಗಿ ಆಸ್ಪತ್ರೆಗಳೂ ಜಿಲ್ಲೆಯಲ್ಲಿ ಇಲ್ಲ. ಜಿಲ್ಲೆಯಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣಮಾಡಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ, ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ದೊಡ್ಡ ಅಭಿಯಾನವನ್ನೆ ಮಾಡಲಾಗಿತ್ತು. ಆದರೆ, ಯಾವುದೇ ಫಲ ಕಂಡಿಲ್ಲ. ಇದೀಗ, ಕೊರೊನಾದಿಂದಾಗಿ ಜಿಲ್ಲೆಯ ಜನರು ಅಕ್ಕಪಕ್ಕದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕ್ಕೊಳ್ಳಬೇಕು. ಈ ಬಗ್ಗೆ ಮತ್ತೆ ಹೋರಾಟ ನಡೆಸಿ, ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣವಾಗುವರೆಗೂ ಪ್ರಯತ್ನಿಸುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.