ಕಾರವಾರ: ಉಪಚುನಾವಣೆಯಲ್ಲಿ ಜನರೇ ಅನರ್ಹರಿಗೆ ಉತ್ತರ ಕೊಡುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅಂಕೋಲಾದ ಆಂದ್ಲೆ ಗ್ರಾಮದ ಜಗದೀಶ್ವರಿದೇವಿ ದೇವಸ್ಥಾನ ಭೇಟಿ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಾವ ಕ್ಷೇತ್ರದಲ್ಲೂ ಉಪಚುನಾವಣೆಯಲ್ಲಿ ಹಗ್ಗಜಗ್ಗಾಟದ ಸ್ಥಿತಿ ಇಲ್ಲ. ಅನರ್ಹ ಶಾಸಕರ ನಡೆಯನ್ನು ಯಾವ ಪಕ್ಷದವರೂ ಸಹ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ, ಅಧಿಕಾರವಿದೆ ಎಂದು ಚುನಾವಣೆ ನಡೆಸುತ್ತಿದ್ದಾರೆ. ಆದರೆ ಮತದಾರ ತೀರ್ಪು ಕೊಡುತ್ತಾನೆ ಎಂದರು.
ಇನ್ನು, ಬಿಎಸ್ವೈ ಅನರ್ಹರ ಗೆಲುವಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಕಾಲಿಗೆ ಚಕ್ರವನ್ನಾದರೂ ಕಟ್ಟಿಕೊಳ್ಳಲಿ. ಶ್ರೀ ಚಕ್ರವನ್ನಾದರೂ ಇಟ್ಟುಕೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ. ಜನರು ನಮಗೆ ಮತ ಹಾಕುವ ಭರವಸೆ ಇದೆ. ಪಕ್ಷ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದರು.