ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 151 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರದಲ್ಲಿ ಭದ್ರವಾಗಿದೆ.
ಜಿಲ್ಲೆಯ ಭಟ್ಕಳ ಪುರಸಭೆ, ಹೊನ್ನಾವರ ಹಾಗೂ ಸಿದ್ದಾಪುರ ಪಟ್ಟಣ ಪಂಚಾಯಿತಿಗಳಿಗೆ ನಿನ್ನೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೂ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಭಟ್ಕಳ ಪುರಸಭೆಯಲ್ಲಿ ಒಟ್ಟು 23 ವಾರ್ಡ್ಗಳಿದ್ದು, ಅದರಲ್ಲಿ12 ವಾರ್ಡ್ಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರಿಂದ 11 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 50.74ರಷ್ಟು ಮತದಾನವಾಗಿದೆ. ಹೊನ್ನಾವರ ಪಟ್ಟಣ ಪಂಚಾಯಿತಿಯ 20 ವಾರ್ಡ್ಗಳ ಪೈಕಿ ಒಂದು ವಾರ್ಡ್ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 19 ವಾರ್ಡ್ಗಳಲ್ಲಿ ಶೇ. 70 ರಷ್ಟು ಮತದಾನವಾಗಿದೆ. ಸಿದ್ದಾಪುರ ಪಟ್ಟಣ ಪಂಚಾಯಿತಿಯ 15 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 73.94ರಷ್ಟು ಮತದಾನವಾಗಿದೆ.
ಎಲ್ಲ ಮತಗಟ್ಟೆಗಳಲ್ಲಿಯೂ ಬಹುತೇಕ ಯಾವುದೇ ಗೊಂದಲ, ತೊಂದರೆ ಇಲ್ಲದೆ ಶಾಂತಿಯುತವಾಗಿ ಮತದಾನವಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಒಂದಾಗಿದ್ದ ಭಟ್ಕಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಉಳಿದಂತೆ ಎಲ್ಲ ಮತಗಟ್ಟೆಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಇದೀಗ ಎಲ್ಲರ ಚಿತ್ತ ಮೇ 31ರಂದು ನಡೆಯಲಿರುವ ಮತ ಎಣಿಕೆಯತ್ತ ನೆಟ್ಟಿದೆ. ಯಾರಿಗೆ ಗೆಲುವು, ಯಾರಿಗೆ ಸೋಲು ಎನ್ನುವುದರ ಕುರಿತ ಲೆಕ್ಕಾಚಾರ ಇದೀಗ ಶುರುವಾಗಿದೆ.