ಕಾರವಾರ : ಕಡಲತೀರದಲ್ಲಿ ಹಾರಾಡುತ್ತಿದ್ದ ಪ್ಯಾರಾ ಮೋಟರ್ ತುಂಡಾಗಿ ಸಮುದ್ರಕ್ಕೆ ಬಿದ್ದ ಪರಿಣಾಮ ಪ್ರವಾಸಿಗನೋರ್ವ ಸಾವನ್ನಪ್ಪಿರುವ ಘಟನೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆದಿದೆ.
ಮಧುಸೂದನ್ ರೆಡ್ಡಿ (55) ಎಂಬ ಆಂಧ್ರಮೂಲದ ವ್ಯಕ್ತಿ ಮೃತರು. ಇವರು ಕಾರವಾರ ನೌಕಾನೆಲೆಯಲ್ಲಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತರನ್ನು ಕರೆದುಕೊಂಡು ಕಡಲತೀರಕ್ಕೆ ಹೋಗಿದ್ದರು.
ಈ ವೇಳೆ ಕಡಲತೀರದಲ್ಲಿ ಕೆಲ ದಿನಗಳ ಹಿಂದಷ್ಟೇ ಆರಂಭಿಸಲಾಗಿದ್ದ ಪ್ಯಾರಾಮೋಟರ್‌ಗೆ ಆಕರ್ಷಣೆಗೊಂಡು ಮೃತ ರೆಡ್ಡಿ ಅವರ ಮೂವರು ಸ್ನೇಹಿತರು ಮೊದಲು ಹಾರಾಟ ನಡೆಸಿದ್ದರು. ಕೊನೆಯದಾಗಿ ಮಧುಸೂದನ್ ಏರಿದ್ದಾಗ ಗಾಳಿಯ ರಭಸಕ್ಕೆ ಪ್ಯಾರಾಮೋಟರ್ ಸುತ್ತಿಕೊಂಡಿದ್ದು, ಪ್ಯಾರಾ ಮೋಟರ್ ಹಾರಿಸುತ್ತಿದ್ದ ಮಾರ್ಗದರ್ಶಕ ಸಹಿತ ಇಬ್ಬರೂ ಸಮುದ್ರಕ್ಕೆ ಬಿದ್ದಿದ್ದಾರೆ. ಪುಣೆಯ ವಿದ್ಯಾಧರ ಎಂಬ ಮಾರ್ಗದರ್ಶಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಮಧುಸೂದನ್ ಕಾಲಿಗೆ ಪ್ಯಾರಾಮೋಟರ್ ದಾರ ಸುತ್ತಿಕೊಂಡ ಪರಿಣಾಮ ನೀರಿನಲ್ಲಿ ಮುಳುಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಲೈಫ್ ಗಾರ್ಡ್ ಸಿಬ್ಬಂದಿ ಮೇಲೆತ್ತಿ ದಡಕ್ಕೆ ತಂದಿದ್ದರಾದ್ರೂ ಪ್ರಯೋಜನವಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.