ಕಾರವಾರ (ಉತ್ತರ ಕನ್ನಡ) : ಕಳೆದ ಆರು ವರ್ಷಗಳಿಂದ ಗ್ರಾಮಸ್ಥರು ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಕುರ್ವಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಎರಡು ಕುಟುಂಬದವರು ನ್ಯಾಯಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಹೊನ್ನಾವರ ತಾಲೂಕಿನ ಕರಿಕುರ್ವ ಗ್ರಾಮದಲ್ಲಿ ಕಳೆದ ಆರು ವರ್ಷಗಳಿಂದ ಎರಡು ಕುಟುಂಬದವರು ಸಾಮಾಜಿಕ ಬಹಿಷ್ಕಾರದ ಶಿಕ್ಷೆ ಎದುರಿಸುತ್ತಿದ್ದಾರೆ. ದೇವಸ್ಥಾನದ ಸಮಿತಿಯ ವಂತಿಗೆ ಹಣ ಬಡ್ಡಿಗೆ ಪಡೆದು ವಾಪಸ್ ನೀಡದ ಹಿನ್ನೆಲೆ ಗ್ರಾಮದ ಲಕ್ಷ್ಮೀ ಬೋಳಾ ಅಂಬಿಗ ಮತ್ತು ಆಶಾ ಗಂಗಾಧರ ಅಂಬಿಗ ಎಂಬ ಎರಡು ಕುಟುಂಬದವರಿಗೆ 2017ರಿಂದ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.
ಕರಿಕುರ್ವಾ ಗ್ರಾಮದಲ್ಲಿ ಅಂಬಿಗ ಸಮಾಜದವರು ಶ್ರೀಗಂಗಾದೇವರ ವಂತಿಗೆ ರೂಪದಲ್ಲಿ ಪ್ರತಿ ವರ್ಷ ಹಣ ಸಂಗ್ರಹ ಮಾಡುತ್ತಾರೆ. ಉಳಿದ ಹಣದಲ್ಲಿ ಗ್ರಾಮಸ್ಥರಿಗೆ ಬಡ್ಡಿ ಸಹಿತ ಸಾಲ ಕೂಡ ನೀಡಲಾಗುತ್ತಿತ್ತು. 2017ರಲ್ಲಿ ಧರ್ಮ ಅಂಬಿಗ ಎಂಬವರು ಇಲ್ಲಿಂದ 14 ಸಾವಿರ ರೂ. ಸಾಲ ಪಡೆದಿದ್ದರು. ವಿಕಲಚೇತನನಾದ ಧರ್ಮ ಅಂಬಿಗ ಸಕಾಲದಲ್ಲಿ ಸಾಲ ಮರುಪಾವತಿಸಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಧರ್ಮನ ಕುಟುಂಬಸ್ಥರಿಗೆ ಸಾಮೂಹಿಕ ಬಹಿಷ್ಕಾರದ ಹಾಕಿದ್ದಾರೆ.
ಇದಾದ ಬಳಿಕ ಲಕ್ಷ್ಮೀ ಎಂಬವರು ತನ್ನ ಮಗ ಮಾಡಿದ ಸಾಲವನ್ನು ಬಡ್ಡಿ ಸಮೇತ ಮರು ಪಾವತಿಸಿದ್ದರು. ಆದರೂ ಕೂಡ ಊರಿನ ಮುಖಂಡರು ಈ ಕುಟುಂಬದವರೊಂದಿಗೆ ಯಾರು ಮಾತನಾಡಬಾರದು, ವ್ಯವಹಾರ ಮಾಡಬಾರದು ಎಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಅಂದಿನಿಂದ ಗ್ರಾಮದಲ್ಲಿರುವ ಅಂಬಿಗ ಸಮಾಜದವರೂ ಕೂಡ ಇವರೊಂದಿಗೆ ಮಾತನಾಡುತ್ತಿಲ್ಲ. ಇವರೊಂದಿಗೆ ಮಾತನಾಡಿದ ಆಶಾ ಗಂಗಾಧರ ಅಂಬಿಗ ಅವರ ಕುಟುಂಬದವರಿಗೂ ಬಹಿಷ್ಕಾರ ಹಾಕಲಾಗಿದೆ.
ಈ ಬಗ್ಗೆ ಮಾತನಾಡಿದ ಬಹಿಷ್ಕಾರಕ್ಕೆ ಒಳಗಾದ ಲಕ್ಷ್ಮೀ ಅಂಬಿಗ ಅವರ ಮಗಳು ಮಂಗಲಾ, ನನ್ನ ಅಣ್ಣ ಇಲ್ಲಿಂದ ಸಾಲ ಪಡೆದುಕೊಂಡಿದ್ದರು. ಇದನ್ನು ನನ್ನ ತಮ್ಮಂದಿರು ಸೇರಿ ಮರುಪಾವತಿ ಮಾಡಿದ್ದರು. ಆದರೂ ಕೂಡ ಅವರು ನಮ್ಮನ್ನು ಬಹಿಷ್ಕಾರ ಮಾಡಿದ್ದಾರೆ. ನಮ್ಮ ಎರಡು ಮನೆಗಳಿಗೆ ಬಹಿಷ್ಕಾರ ವಿಧಿಸಿದ್ದಾರೆ ಎಂದರು. ಅಲ್ಲದೆ ಗ್ರಾಮದ ಸಭೆಗೆ ನಮ್ಮನ್ನು ಕರೆಯುತ್ತಿಲ್ಲ. ಬಾವಿ ನೀರು ಕೂಡ ಕೊಡುತ್ತಿಲ್ಲ. ಕೊಟ್ಟವರಿಗೆ ದಂಡ ಹಾಕುವುದಾಗಿ ಹೇಳಿದ್ದಾರೆ. ನಮ್ಮೊಂದಿಗೆ ಯಾರೂ ಮಾತನಾಡುವುದಿಲ್ಲ. ನಾವು ಹಿಡಿದ ಮೀನು ಯಾರೂ ಖರೀದಿಸುವುದಿಲ್ಲ. ಡಿಂಗಿಯಲ್ಲಿ ತೆರಳಲು ಬಿಡುತ್ತಿಲ್ಲ. ಕಳೆದ ಆರು ವರ್ಷಗಳಿಂದ ನಾವು ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತಿದ್ದೇವೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಲಕ್ಷ್ಮೀ ಅವರ ಮಗ ಮಂಜುನಾಥ್ ಮಾತನಾಡಿ, ಕಳೆದ ಜುಲೈ 2ರಂದು ನನ್ನ ಮದುವೆ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ವಧುವಿನ ಕುಟುಂಬದವರಿಗೆ ಕರೆ ಮಾಡಿ ಮದುವೆ ಮಾಡಿಕೊಳ್ಳದಂತೆ ಹೇಳಿದ್ದಾರೆ. ಹೀಗಾಗಿ ಮದುವೆ ಸಂಬಂಧ ಮುರಿದು ಹೋಗಿದೆ. ಗ್ರಾಮದ ಮುಖಂಡರು ನಮಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿಲ್ಲ ಎಂದು ಸುಳ್ಳು ಹೇಳುತ್ತಾರೆ. ಹೀಗಾಗಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಸಾರ್ವಜನಿಕರಿಗೆ ಸಮಸ್ಯೆ ಪರಿಹಾರದ ಜೊತೆ ಜ್ಞಾನ ದಾಸೋಹ: ಬೆಳಗಾವಿ ಡಿಸಿ ಕಾರ್ಯಕ್ಕೆ ಜನ ಮೆಚ್ಚುಗೆ