ಶಿರಸಿ: ರಾಜ್ಯ ಸರ್ಕಾರ ಬಜೆಟ್ನಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಕುರಿತು ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ದೊಡ್ಡ ವಿರೊಧ ವ್ಯಕ್ತವಾಗಿದೆ. ಯೋಜನೆ ಕುರಿತು ಬೃಹತ್ ಸಮಾಲೋಚನಾ ಕಾರ್ಯಗಾರವನ್ನೂ ನಡೆಸಿದ್ದು, ಅಗತ್ಯ ಬಿದ್ದಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಮುಂದಾಳತ್ವದಲ್ಲಿ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಬೇಡ್ತಿ-ವರದಾ ನದಿಯ ನೀರು ಜೋಡಿಸಿ, ಇದರಲ್ಲಿ ಹರಿದು ಸಮುದ್ರಕ್ಕೆ ಸೇರುವ 22 ಟಿಎಂಸಿ ನೀರನ್ನು ಹಾವೇರಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವ ಯೋಜನೆಯನ್ನು, ಈಗಿನ ಸರ್ಕಾರ ಬಜೆಟ್ನಲ್ಲಿ ಪ್ರಸ್ತಾಪಿಸಿದೆ. ವಿಸ್ತೃತ ಯೋಜನಾ ವರದಿ (ಎನ್.ಡಬ್ಯ್ಲೂ,ಡಿ.ಎ) ಸಿದ್ದಪಡಿಸಲು ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜನ್ಸಿಗೆ ಮನವಿ ಮಾಡುವುದಾಗಿ ಯಡಿಯೂರಪ್ಪನವರು ತಿಳಿಸಿದ್ದಾರೆ.
ಆದ್ರೆ ಈ ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದ ಜೀವ ಸಂಕುಲಗಳಿಗೆ ತೊಂದರೆಯಾಗುವ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜಲಮೂಲ ಕೊರತೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಇಂದು ಸೋಂದಾದ ಸ್ವರ್ಣವಲ್ಲೀ ಮಠದ ಗಂಗಾದರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾಧಕ ಭಾದಕದ ಕುರಿತು ಚರ್ಚೆ ನಡೆಸುವ ಜೊತೆಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರದಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಒಂದು ವೇಳೆ ಯೋಜನೆ ಅನುಷ್ಠಾನವಾದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ದತೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಗಳಿದ್ದು, ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುತ್ತದೆ. ಇನ್ನು ಮಲೆನಾಡಿನಲ್ಲಿ ಕೂಡ ಕುಡಿಯುವ ನೀರಿನ ಸಮಸ್ಯೆ ಇದ್ದು ಬೇಡ್ತಿ ನದಿ ನೀರನ್ನು ಯಲ್ಲಾಪುರ, ಅಂಕೋಲ, ಕಾರವಾರ ಭಾಗಕ್ಕೆ ಹಾಗೂ ಕೃಷಿ ಚಟುವಟಿಕೆಗೆ ಬಳಸಲಾಗುತ್ತದೆ.
ರಾಜ್ಯ ಸರ್ಕಾರ ದೊಡ್ಡ ಯೋಜನೆಗೆ ಸಿದ್ದತೆ ಮಾಡಿಕೊಂಡಿದ್ದು ನೀರನ್ನು ಸಂಗ್ರಹಿಸಿಡಲು ಜಲಾಶಯದಲ್ಲಿ ಸುರಂಗ ಮಾದರಿಯಲ್ಲಿ ದೊಡ್ಡ ಬಾವಿಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ಶಿರಸಿ ಪಟ್ಟಣದ ಹೊಳೆ,ಶಲ್ಮಲಾ ನದಿ ಹಾಗೂ ಯಲ್ಲಾಪುರದ ಬೇಡ್ತಿ ನದಿಗೆ ದೊಡ್ಡ ಜಲಾಶಯಗಳನ್ನು ನಿರ್ಮಿಸಿ ಅವುಗಳಿಂದ ಬೃಹತ್ ಪಂಪ್‍ಗಳ ಮೂಲಕ ನೀರನ್ನು ಮೇಲೆತ್ತಿ ಬಾರಿ ಗಾತ್ರದ ಪೈಪ್ ಲೈನ್ಗಳಲ್ಲಿ ಹರಿಸಲಾಗುತ್ತದೆ. ಹೀಗಾಗಿ ಮಲೆನಾಡು ಭಾಗದಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿದೆ.
ಸದ್ಯ ಇದೇ ಮಾದರಿಯಲ್ಲಿ ಕಾಳಿ ನದಿಯಿಂದ ಅಳ್ನಾವರಕ್ಕೆ ನೀರು ಸಾಗಿಸುವ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದೆ. ಇದನ್ನು ವಿರೋಧಿಸಿ 40 ದಿನದಿಂದ ಕಾಳಿ ಹೋರಾಟ ಸಮಿತಿ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಸರ್ಕಾರ ವರದಾ-ಬೇಡ್ತಿ ನದಿ ಜೋಡಣೆ ಪ್ರಸ್ತಾಪ ಸಲ್ಲಿಸಿರುವುದು ಜಿಲ್ಲೆಯ ಜನರಿಗೆ ಆಕ್ರೋಶ ತರಿಸಿದೆ. ಯೋಜನೆ ಅನುಷ್ಟಾನಕ್ಕೂ ಮೊದಲು ದೊಡ್ಡ ವಿರೋಧ ವ್ಯಕ್ತವಾಗಿದ್ದು ಸರ್ಕಾರ ಮುಂದೆ ಯಾವ ಹೆಜ್ಜೆ ಇಡಲಿದೆ ಎಂಬುದನ್ನು ಕಾದುನೋಡಬೇಕಿದೆ.