ಕಾರವಾರ: ಕೊರೊನಾ ಸೋಂಕಿನಿಂದ ಸಾವನಪ್ಪಿರುವ ವ್ಯಕ್ತಿಯನ್ನು ತಮ್ಮ ವಾರ್ಡಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಶಿರಸಿ ಮೂಲದ 42 ವರ್ಷದ ವ್ಯಕ್ತಿಯೋರ್ವರು ಇಂದು ಸಂಜೆ ಕಾರವಾರದ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವ್ಯಕ್ತಿಯನ್ನು ಕೊವಿಡ್-19 ನಿಯಮಾನುಸಾರ ವಾರ್ಡ್ ನಂ 7ರ ಸರ್ವೋದಯ ನಗರ ಬಳಿ ಇರುವ ಸ್ಮಶಾನದಲ್ಲಿ ಹೊಂಡತೋಡಿ ಹೂಳಲು ಅಧಿಕಾರಿಗಳು ಸಿದ್ದತೆ ನಡೆಸಿದ್ದರು. ಆದರೆ, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಕಾರವಾರದ ಸುಮಾರು 18 ವಾರ್ಡ್ನಲ್ಲಿ ಯಾರೇ ಸಾವನ್ನಪ್ಪಿದರೂ ಇಲ್ಲಿಯೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಇಂತಹ ಪ್ರದೇಶದಲ್ಲಿ ಕೋವಿಡ್ ಸೋಂಕು ತಗುಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಹೂಳುವುದಕ್ಕೆ ಸ್ಥಳೀಯರ ವಿರೋಧವಿದೆ. ಅಲ್ಲದೆ ನಗರಸಭೆಯ ಎಲ್ಲ ಸದಸ್ಯರು ಕೂಡ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇದೀಗ ಶಾಸಕಿ ರೂಪಾಲಿ ನಾಯ್ಕ ಬೇರೆಡೆ ಅಂತ್ಯಸಂಸ್ಕಾರ ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದು, ನಾವು ಯಾವುದೇ ಕಾರಣಕ್ಕೂ ಸ್ಮಶಾನದಲ್ಲಿ ಅವಕಾಶ ನೀಡುವುದಿಲ್ಲ ಎಂದು ನಗರಸಭೆ ಸದಸ್ಯೆ ಶಿಲ್ಪಾ ನಾಯಕ್ ವಿರೋಧ ವ್ಯಕ್ತಪಡಿಸಿದ್ದಾರೆ.