ಕಾರವಾರ: ಕೈಗಾ ಇದು ದೇಶದ ಪ್ರತಿಷ್ಠಿತ ಅಣು ವಿದ್ಯುತ್ ಸ್ಥಾವರಗಳಲ್ಲೊಂದು. ಒಟ್ಟು ನಾಲ್ಕು ಅಣು ವಿದ್ಯುತ್ ಘಟಕಗಳ ಮೂಲಕ ದೇಶಕ್ಕೆ ವಿದ್ಯುತ್ ಹರಿಸುತ್ತಿರುವ ಭಾರತೀಯ ಅಣು ವಿದ್ಯುತ್ ನಿಗಮವು ಇದೀಗ ಹೆಚ್ಚುವರಿಯಾಗಿ ಮತ್ತೆರಡು ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಈ ಘಟಕಗಳ ನಿರ್ಮಾಣಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪರವಾನಿಗೆ ಪಡೆಯದೇ ಪರಿಸರ ಸೂಕ್ಷ್ಮವಲಯದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ದೂರು ಸಲ್ಲಿಸುವ ಜತೆಗೆ ಹೋರಾಟಕ್ಕೆ ವೇದಿಕೆ ಸಜ್ಜುಗೊಳಿಸಲು ಮುಂದಾಗಿದ್ದಾರೆ.
ಹೌದು, ಕಾರವಾರ ತಾಲೂಕಿನ ಕೈಗಾದಲ್ಲಿ ಈಗಾಗಲೇ 220 ಮೆಗಾ ವ್ಯಾಟ್ ಸಾಮರ್ಥ್ಯದ ಒಟ್ಟು ನಾಲ್ಕು ಅಣು ವಿದ್ಯುತ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಇದೀಗ ಹೆಚ್ಚುವರಿಯಾಗಿ ತಲಾ 700 ಮೆಗಾ ವ್ಯಾಟ್ ಸಾಮರ್ಥ್ಯದ 5 ಮತ್ತು 6ನೇ ಘಟಕ ಸ್ಥಾಪನೆಗೆ ಭಾರತೀಯ ಅಣು ವಿದ್ಯುತ್ ನಿಗಮವು ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ಇದರಿಂದ ಹೆಚ್ಚುವರಿಯಾಗಿ ಕೈಗಾದಲ್ಲಿ ಮತ್ತೆರಡು ಘಟಕಗಳು ಸ್ಥಾಪನೆಗೊಳ್ಳುವುದು ಖಚಿತವಾಗಿದ್ದು, ಪರಿಸರ ಮೌಲ್ಯ ನಿರ್ಣಯ ಸಮಿತಿ (ಇಎಸಿ) ನೀಡಿರುವ ಅನುಮತಿಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೋರಾಟಕ್ಕೆ ಸಜ್ಜಾದ ಸ್ಥಳೀಯರು: ಇನ್ನು ಪರಿಸರವಾದಿಗಳು ಹಾಗೂ ಸ್ಥಳೀಯರು ಘಟಕ ಸ್ಥಾಪನೆ ಬಗ್ಗೆ ಆರಂಭದಿಂದಲೂ ವಿರೋಧ ಮಾಡುತ್ತಿದ್ದು, ಈ ಬಗ್ಗೆ ಕಳೆದ ವರ್ಷ ಬೃಹತ್ ಹೋರಾಟ ಕೂಡ ನಡೆಸಲಾಗಿದೆ. ಆದರೂ ವಿರೋಧದ ನಡುವೆ ಹೆಚ್ಚುವರಿ ಘಟಕ ಸ್ಥಾಪನೆಗೆ ಮುಂದಾಗಿರುವುದಕ್ಕೆ ಇದೀಗ ಕೈಗಾ ಅಣುವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಕ್ಕೆ ಹೋರಾಟ ಸಮಿತಿ ಮತ್ತೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡಿರುವ ಸಮಿತಿಯು ಕೈಗಾ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು 2018 ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ಸಮೀಪದಲ್ಲಿಯೇ ವನ್ಯಜೀವಿ ಧಾಮಗಳಿವೆ. ಆದರೂ ಪರಿಸರ ಸಚಿವಾಲಯ ಅನುಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಹಸಿರು ಮಂಡಳಿಯಲ್ಲಿ ದೂರು ದಾಖಲಿಸಿ ಹೋರಾಟ ನಡೆಸುತ್ತೇವೆ ಎನ್ನುತ್ತಾರೆ ಸ್ಥಳೀಯರು
ಇನ್ನು ಈಗಾಗಲೇ ನಿರ್ಮಾಣಗೊಂಡಿರುವ ಅಪಾಯಕಾರಿ ಘಟಕಗಳಿಂದಾಗಿ ಸ್ಥಳೀಯರಲ್ಲಿ ಕ್ಯಾನ್ಸರ್ ನಂತಹ ರೋಗಗಳು ಹೆಚ್ಚಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಿರುವ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆ ವರದಿಯಲ್ಲಿ ಕೈಗಾ ಸುತ್ತಮುತ್ತಲಿನ ಪ್ರದೇಶದಲ್ಲಿ 300 ಕ್ಕೂ ಹೆಚ್ಚು ರೋಗಿಗಳು ಇರುವುದು ಪತ್ತೆಯಾಗಿದೆ. ನಾಲ್ಕು ಘಟಕವನ್ನೊಳಗೊಂಡ ಕೈಗಾದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದಲ್ಲಿ ಪ್ರಥಮ ಚಿಕಿತ್ಸೆಗೆ ಇಲ್ಲವೇ ಪುನರ್ವಸತಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಕೈಗಾ ಅಣು ವಿದ್ಯುತ್ ಘಟಕಗಳಿಗೆ ಬಳಕೆ ಮಾಡಿದ ನೀರನ್ನು ಕಾಳಿ ನದಿಗೆ ಹರಿಸುವುದರಿಂದ ಜನ ಜಾನುವಾರು ಸೇರಿದಂತೆ ಜಲಚರಗಳಿಗೆ ತಗುಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದೆ.
ಇನ್ನು ಕೈಗಾದಲ್ಲಿ ರಸ್ತೆಗಳು ಸಂಪೂರ್ಣ ದುರಸ್ಥಿಗೆ ತಲುಪಿದ್ದು, ತುರ್ತು ಸಂದರ್ಭದಲ್ಲಿ ತೆರಳಲು ಯಾವುದೇ ಸಂಪರ್ಕ ರಸ್ತೆ ಕೂಡ ಇಲ್ಲ ಹೀಗಿರುವಾಗ ಮತ್ತೆರಡು ಘಟಕ ನಿರ್ಮಾಣ ಮಾಡಿದಲ್ಲಿ ಸ್ಥಳೀಯರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಇಂತಹ ಹತ್ತಾರು ಕಾರಣಗಳಿಂದಾಗಿ ನಾವು ಹೆಚ್ಚುವರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎನ್ನುತ್ತಾರೆ ಹೋರಾಟ ಸಮಿತಿ ಅಧ್ಯಕ್ಷ ಶಾಂತಾ ಬಿಕ್ಕು ಬಾಂದೇಕರ್.
ಒಟ್ಟಿನಲ್ಲಿ ಅಣು ವಿದ್ಯುತ್ ಘಟಕದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆಯಾದರೂ ಅಪಾಯಕಾರಿ ಘಟಕಗಳನ್ನು ಮಗ್ಗುಲಲ್ಲಿ ಇಟ್ಟುಕೊಂಡು ಬದುಕಲು ಸಾಧ್ಯವಿಲ್ಲ. ಬದಲಿಗೆ ನೈಸರ್ಗಿಕವಾಗಿ ಸಿಗುವ ಸೌರ ಇಲ್ಲ ಬೇರೆ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಮುಂದಾಗಬೇಕು. ತಕ್ಷಣ ಹೆಚ್ಚುವರಿ ಅಣು ವಿದ್ಯುತ್ ಘಟಕಗಳ ಸ್ಥಾಪನೆಯನ್ನು ಕೈ ಬಿಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.