ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮೋದಿ ಅಭಿಮಾನಿಯೊಬ್ಬ ವರ್ಷ ಪೂರ್ತಿ ಅವರ ಭಜನೆ ಮಾಡುತ್ತಾ, ಮೋದಿಯವರ ಪೇಪರ್ ಕಟಿಂಗ್ಸ್, ಮ್ಯಾಗ್ಸಿನ್ ಕಟಿಂಗ್ಗಳನ್ನು ಶೇಖರಿಸಿ, ಮೋದಿಯವರ ಫೋಟೋ ಕಲೆಕ್ಷನ್ ಮಾಡಿ ಅವರ ಮೇಲಿನ ಭಕ್ತಿಯನ್ನು ಮೆರೆದಿದ್ದಾರೆ.
ಅಷ್ಟೇ ಅಲ್ಲದೇ ಅವುಗಳಿಗೆ ಲಾಮ್ನೇಶನ್ ಮಾಡಿ ಮನೆಯಲ್ಲಿ ಶೇಖರಿಸಿ ಇಟ್ಟಿದ್ದಾರೆ. ಕಲೆಯನ್ನು ಜೀವಾಳ ಮಾಡಿಕೊಂಡು ಬಂದ ಇವರು ಕಳೆದ 8 ತಿಂಗಳಿನಿಂದ ಮೋದಿಯವರ ಜೀವನ ಚರಿತ್ರಯೆನ್ನು ಸಂಗ್ರಹ ಮಾಡುತ್ತಿದ್ದಾರೆ.
ಮೂಲತಃ ಕಲೆಯನ್ನು ನೆಚ್ಚಿಕೊಂಡು ಬಂದ ಕುಟುಂಬ ಇವರದಾಗಿದೆ. ವೆಂಕಣ್ಣನ ತಂದೆಯವರೂ ಸಹ ಗಣಪತಿ ಮೂರ್ತಿಯನ್ನು ಮಾಡುವಲ್ಲಿ ನಿಪುಣರಾಗಿದ್ದರು. ಅವರಿಂದ ಕಲೆಯನ್ನು ಬಳುವಳಿಯಾಗಿ ಪಡೆದ ಇವರು ಮೋದಿಯವರ ಜೀವನ ಚರಿತ್ರೆಯನ್ನು ಸಾರುವ ಕಟಿಂಗ್ಸ್ಗಳನ್ನು ಒಟ್ಟು ಮಾಡಿ ಅವುಗಳಿಗೆ ತಮ್ಮ ಕಲೆಯ ಮೂಲಕ ಜೀವ ತುಂಬಿದ್ದಾರೆ.
ಬಿಳಿ ಹಾಳೆಯ ಮೇಲೆ ಅಶ್ವಥ ಎಲೆಯನ್ನು ಬಳಸಿ, ಕೆಲವೊಂದರಲ್ಲಿ ಬಿಜೆಪಿ ಚಿಹ್ನೆಯನ್ನು ಬಳಸಿ ಕಟಿಂಗ್ಸ್ ತಯಾರು ಮಾಡಿದ್ದಾರೆ. ಅಲ್ಲದೇ ಮುಂದಿನ 25 ವರ್ಷಗಳ ವರೆಗೆ ಹಾಳಾಗಬಾರದು ಎಂಬ ಕಾರಣಕ್ಕೆ ಲಾಮಿನೇಶನ್ ಮಾಡಲಾಗಿದೆ. ಅಶ್ವಥ ಎಲೆ ಸರ್ವ ಧರ್ಮದ ಸಂಕೇತವಾದ ಕಾರಣ ಅದನ್ನು ಬಳಸಲಾಗಿದೆ ಎನ್ನುತ್ತಾರೆ ವೆಂಕಣ್ಣ.
ಮನೆಯ ಯಜಮಾನನಾಗಿ ತಮ್ಮ ಸಾಂಸಾರಿಕ ಕೆಲಸವನ್ನು ಮರೆಯದೇ ಹಗಲಿನಲ್ಲಿ ಕೃಷಿ ಕೆಲಸ ಹಾಗೂ ರಾತ್ರಿಯ ವೇಳೆಯಲ್ಲಿ ತಮ್ಮ ಕಲಾಸಕ್ತಿಯನ್ನು ವೆಂಕಣ್ಣ ಮುಂದುವರೆಸಿಕೊಂಡು ಬಂದಿದ್ದಾರೆ. ಇವರ ಮೋದಿ ಪೋಟೋ ಕಲೆಕ್ಷನ್ ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಬರುತ್ತಾರೆ. ಮನೆಯನ್ನು ಆರ್ಟ್ ಗ್ಯಾಲರಿ ಮಾಡಿಕೊಂಡಿರುವ ಇವರ ಸಾಧನೆಯನ್ನು ಎಲ್ಲರೂ ಮೆಚ್ಚುತ್ತಾರೆ.
ಒಟ್ಟಾರೆಯಾಗಿ ಇವರು ತಮ್ಮ ನೆಚ್ಚಿನ ನಾಯಕ, ಇವರು ನಮ್ಮವರು ಎಂದು ಬಾಯಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಅಭಿಮಾನಿಗಳ ಎದುರು ಯಾವುದೇ ಪ್ರಚಾರ ಬಯಸದೇ ಫೋಟೋ ಸಂಗ್ರಹ ಮಾಡಿ ತಮ್ಮ ಭಕ್ತಿಯನ್ನು ವೆಂಕಣ್ಣ ತೋರಿಸುತ್ತಿದ್ದಾರೆ. ಅಲ್ಲದೇ ಚುನಾಣೆಯ ಸಂದರ್ಭದಲ್ಲಿ ಮತದಾನ ಮಾಡುವಂತೆ ಸ್ಥಳೀಕರಲ್ಲಿ ಜಾಗೃತಿಯನ್ನೂ ಮೂಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.