ಶಿರಸಿ: ಹಬ್ಬಗಳೆಂದರೆ ಸಾಮಾನ್ಯವಾಗಿ ಎಲ್ಲಡೆ ಸಂಭ್ರಮದ ವಾತಾವರಣದಿಂದ ಕೂಡಿರುತ್ತದೆ, ಅದರಲ್ಲೂ ಮಲೆನಾಡಿಗರಿಗೆ ಯಾವುದೇ ಹಬ್ಬ ಬಂದರೂ ಅದರಲ್ಲೇನೋ ವಿಶೇಷತೆ ಇದ್ದೇ ಇರತ್ತೆ. ಇದೀಗ ಗೌರಿ - ಗಣೇಶ ಹಬ್ಬದ ಸಡಗರದಲ್ಲಿರುವ ಶಿರಸಿಗರು, ವಿಶೇಷ ತಿಂಡಿ ತಿನಿಸು ಮಾಡುವುದರಲ್ಲಿ ನಿರತರಾಗಿದ್ದು, ಚಕ್ಕುಲಿ ಕಂಬಳ ಎಂಬುದು ಈ ಪ್ರಾಂತ್ಯದ ವಿಶೇಷತೆಯಾಗಿದೆ.
ಚೌತಿ ಹಬ್ಬದ ನಿಮಿತ್ತ ಗಣೇಶನಿಗೆ ಪ್ರಿಯವಾದ ಅಡುಗೆಗಳನ್ನು ಮಾಡುವುದು ಎಲ್ಲೆಡೆ ರೂಢಿಯಲ್ಲಿದೆ, ಆದರೆ, ಉತ್ತರ ಕನ್ನಡದ ಶಿರಸಿ ಹಾಗೂ ಹೊನ್ನಾವರ ಭಾಗಗಳಲ್ಲಿ ಚೌತಿ ಹಬ್ಬದ ವಿಶೇಷವಾಗಿ ಕನಿಷ್ಠ 16 ರಿಂದ 21 ಬಗೆಯ ತಿನಿಸುಗಳನ್ನು ಮಾಡುವುದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಗಣೇಶನಿಗೆ ಪ್ರಿಯವಾದ ಚಕ್ಕುಲಿ ತಿನಿಸನ್ನು ಸಾಮಾನ್ಯವಾಗಿ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಮಾಡಲಾಗುತ್ತದೆ. ಆದರೆ, ಶಿರಸಿಯಲ್ಲಿ ಚಕ್ಕುಲಿ ಮಾಡುವುದನ್ನೇ ಒಂದು ಹಬ್ಬದ ರೀತಿಯಲ್ಲಿ ಆಚರಿಸುವ ಜನರು, ಚೌತಿ ಹಬ್ಬದಲ್ಲಿ ಎಲ್ಲರೂ ಒಟ್ಟುಗೂಡಿ ಚಕ್ಕುಲಿ ಮಾಡುವುದಕ್ಕೆ ಚಕ್ಕುಲಿ ಕಂಬಳ ಎಂದೇ ಕರೆಯುತ್ತಾರೆ.
ರಾತ್ರಿ ಕಳೆದು ಬೆಳಗಾದರೆ ಈ ಬಾರಿಯ ಚೌತಿ ಹಬ್ಬ ಬಂದಿದ್ದು, ಶಿರಸಿ ತಾಲೂಕಿನಾದ್ಯಂತ ಚಕ್ಕುಲಿ ಕಂಬಳ ಜೋರಾಗಿಯೇ ನಡೆಯುತ್ತಿದೆ. ತಾಲೂಕಿನ ಹೆಗಡೆಕಟ್ಟ, ಕಲ್ಮನೆ, ಹೆಗ್ಗಾರು ಸೇರಿದಂತೆ ಇನ್ನಿತರ ಉರುಗಳಲ್ಲಿಯೂ ಚಕ್ಕುಲಿ ಕಂಬಳದಲ್ಲಿ ಬ್ಯುಸಿಯಾಗಿರುವ ಜನರು, ಒಬ್ಬರ ಮನೆಗೆ ಮತ್ತೊಬ್ಬರು ತೆರಳಿ ಮಾತು ಕತೆ ಹರಟೆಯೊಂದಿಗೆ ಚಕ್ಕುಲಿ ಮಾಡಲು ಸಹಕರಿಸುತ್ತಾರೆ.
ಚಕ್ಕುಲಿ ಕಂಬಳ ಎಂದರೆ ಶಿರಸಿಗರಿಗೆ ಎಂದಿಲ್ಲದ ಸಂತೋಷ:
ಕಾಲ ಬದಲಾದಂತೆ ಮನುಷ್ಯ ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದಾನೆ. ಆದರೆ, ಚಕ್ಕುಲಿ ಕಂಬಳದ ವಿಷಯದಲ್ಲಿ ಮಾತ್ರ ಶಿರಸಿಯ ಕೆಲ ಊರುಗಳಲ್ಲಿ ತಮ್ಮ ಸಾಂಪ್ರದಾಯಿಕ ಪದ್ದತಿಯನ್ನೇ ಅನುಸರಿಸಿಕೊಂಡು ಬಂದಿದ್ದಾರೆ. ಹಿಂದಿನಿಂದ ಬಂದ ಸಂಪ್ರದಾಯ ಒಂದು ಕಡೆ ಆಗಿದ್ರೆ ಇಂತಹ ವಿಶೇಷ ಕಲೆ ಎಲ್ಲರಿಗೂ ಬರುವುದಿಲ್ಲ, ಅದಲ್ಲದೇ ಈ ಚಕ್ಕುಲಿಗಳು ಉಪಕರಣಗಳಿಂದ ಮಾಡಿದ ಚಕ್ಕುಲಿಗಿಂತ ಬಹಳ ರುಚಿಯಾಗಿದ್ದು, ಹೆಚ್ಚು ದಿನಗಳ ಕಾಲ ಚಕ್ಕುಲಿಯ ತಾಜಾತನ ಉಳಿಯಲಿದೆ. ಈ ಪದ್ಧತಿ ಈ ಭಾಗದಲ್ಲಿ ತುಂಬಾ ಹಳೆಯದಾಗಿದ್ದು, ಇದರಿಂದ ಪರಪಂಪರೆಯನ್ನು ಉಳಿಸಿಕೊಂಡು ಹೋಗುವ ಕೆಲಸವೂ ನಡೆಯುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಚಕ್ಕುಲಿ ಎನ್ನುವುದು ಕೆಲವರಿಗೆ ಕೇವಲ ತಿನಿಸಾಗಿದ್ದರೆ, ಇನ್ನು ಕೆಲವರು ಹಬ್ಬದ ಪ್ರಯುಕ್ತ ದೇವರಿಗೆ ನೈವೇಧ್ಯಕ್ಕೆ ಚಕ್ಕುಲಿ ಮಾಡಲಾಗುವುದು ಎನ್ನುತ್ತಾರೆ. ಆದರೆ, ಮಲೆನಾಡಿಗರಿಗೆ ಹಾಗೂ ಶಿರಸಿಗರಿಗೆ ಇದೊಂದು ಸಂಭ್ರಮ, ಸಂಪ್ರದಾಯ ಹಾಗೂ ಎಲ್ಲರೊಂದಿಗೆ ಕೂಡಿ ಕಂಬಳ ಮಾಡುವ ಭಾವೈಕ್ಯತೆಯಾಗಿದೆ.