ಕಾರವಾರ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್ ವಿಫಲವಾಗುತ್ತಿದೆ. ಪರಿಣಾಮ ಕೊರೊನಾ ಸೋಂಕು ತಡೆ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಆದ್ರೆ ಉತ್ತರಕನ್ನಡ ಜಿಲ್ಲೆಯಲ್ಲಿ ಆರಂಭದಿಂದಲೂ ಕಟ್ಟುನಿಟ್ಟಾಗಿ ಜಾರಿಗೊಂಡ ಲಾಕ್‌ಡೌನ್ ಹಾಗೂ ಅಧಿಕಾರಿಗಳ ದೂರದೃಷ್ಟಿ ಕೊರೊನಾ ವೈರಸ್ಅನ್ನು ನಿಯಂತ್ರಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ 11 ಇದ್ದ ಸೋಂಕಿತರ ಸಂಖ್ಯೆಯನ್ನು ಮೂರಕ್ಕೆ ಇಳಿದಿದೆ. ಅಲ್ಲದೆ, ರೆಡ್ ಝೋನ್ ನಿಂದ ಪಾರಾಗಿ ಆರೆಂಜ್ ಝೋನ್ಗೆ ಬಂದಿದೆ. ರಾಜ್ಯದಲ್ಲಿ ಕೊರೊನಾ ಆತಂಕ ಶುರುವಾದಾಗಿನಿಂದಲೇ ಮುಂಜಾಗೃತೆ ವಹಿಸಿದ್ದ ಉತ್ತರಕನ್ನಡ ಜಿಲ್ಲಾಡಳಿತ ದುಬೈನಿಂದ ಹೆಚ್ಚು ಜನರು ಆಗಮಿಸಿದ್ದ ಭಟ್ಕಳದಲ್ಲಿ ಮುಂಜಾಗೃತೆ ವಹಿಸಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದಾದ ಬಳಿಕ ಜಿಲ್ಲೆಯಲ್ಲೂ ಲಾಕ್‌ಡೌನ್ ಜಾರಿಯಾಗಿತ್ತು. ಬಳಿಕ ಜನರು ಅಗತ್ಯ ವಸ್ತುಗಳಿಗಾಗಿ ಮನೆಯಿಂದ ಹೊರ ಬರುವುದನ್ನು ತಡೆಯಲು ಮನೆ ಬಾಗಿಲಿಗೆ ವಸ್ತುಗಳನ್ನು ಪೂರೈಸಲಾಗಿತ್ತು. ಅಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಅನಾರೋಗ್ಯಕ್ಕೆ ತುತ್ತಾದವರ ಮಾಹಿತಿ ಪಡೆದು ಚಿಕಿತ್ಸೆ ನೀಡಿದ್ದರು. ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು, ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ಬರಲು ಮೂವರು ಹಿರಿಯ ಅಧಿಕಾರಿಗಳ ಶ್ರಮ ಇದೀಗ ಸಾಕಾರಗೊಂಡಿದೆ. ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಅವರು ಜಾರಿಗೊಳಿಸಿದ ಮನೆ ಬಾಗಿಲಿಗೆ ಜೀವನಾವಶ್ಯಕ ವಸ್ತುಗಳ ಪೂರೈಕೆ, ಎಸ್ಪಿ ಶಿವಪ್ರಕಾಶ ದೇವರಾಜು ಅವರ ಯಶಸ್ವಿ ಲಾಕ್ ಡೌನ್ ಜಾರಿ ಹಾಗೂ ಸಿಇಒ ಎಂ ರೋಶನ್ ಅವರು ಆರೋಗ್ಯ ಹಾಗೂ ಕೊರೊನಾ ಚಿಕಿತ್ಸೆಗೆ ತೆಗೆದುಕೊಂಡ ದೂರದೃಷ್ಟಿ ಕ್ರಮಗಳು ಜಿಲ್ಲೆಯನ್ನು ಇಂದು ಆರೆಂಜ್ ಝೋನ್ ನತ್ತ ತಂದು ನಿಲ್ಲಿಸಿದೆ. ಸದ್ಯ ಭಟ್ಕಳ ಮೂಲದವರಲ್ಲಿ ಪತ್ತೆಯಾಗಿದ್ದ 11 ಪ್ರಕರಣಗಳಲ್ಲಿ 8 ಜನರು ಗುಣಮುಖರಾಗಿದ್ದು, ಓರ್ವ ಗರ್ಭಿಣಿ ಉಡುಪಿಯಲ್ಲಿ ಹಾಗೂ ಆಕೆಯ ಪತಿ ಮತ್ತು ಇನ್ನೊಬ್ಬರು ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆದಿದ್ದು, ಅಗತ್ಯ ವಸ್ತುಗಳ ಪೂರೈಕೆ ಹಾಗೂ ಜನರ ಓಡಾಟಕ್ಕೆ ಇ-ಪಾಸ್ ನೀಡುವ ಮೂಲಕ ಅನಗತ್ಯವಾಗಿ ಜನರು ಓಡಾಟ ನಡೆಸುವುದನ್ನು ನಿಯಂತ್ರಿಸಲಾಗಿದೆ ಅಂತಾ ಜಿಲ್ಲಾಧಿಕಾರಿ ಡಾ. ಕೆ ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಜಿಲ್ಲೆಯಲ್ಲಿ ವಿದೇಶದಿಂದ ವಾಪಸಾದವರನ್ನು ಗುರುತಿಸಿ ಅವರ ಗಂಟಲು ದ್ರವದ ಮಾದರಿಯನ್ನ ಪರೀಕ್ಷೆ ಮಾಡಲಾಗಿದ್ದು, ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಭಟ್ಕಳದಲ್ಲಿ ಮೆಡಿಕಲ್ ಎಮರ್ಜೆನ್ಸಿ ಜಾರಿಗೊಳಿಸಿದ್ದು, ಯಾರೂ ಕೂಡ ಹೊರ ಬರದಂತೆ ಹದ್ದಿನ ಕಣ್ಣಿಡಲಾಗಿದೆ. ಸದ್ಯ ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದು, ಇದರ ಹಿಂದಿನ ಅಧಿಕಾರಿಗಳು ಹಾಗೂ ಕೊರೊನಾ ವಾರಿಯರ್ಸ್ ಪಾತ್ರ ಮೆಚ್ಚುವಂತದ್ದಾಗಿದೆ.