ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಉತ್ತಮ ಎಪಿಎಂಸಿ ಎಂದು ಹೆಸರುವಾಸಿಯಾಗಿರುವ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ, ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅ.18ರಂದು ಚುನಾವಣೆ ನಡೆಯಲಿದೆ.
ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು, ಬಿಜೆಪಿ ಮೇಲುಗೈ ಸಾಧಿಸುವ ಎಲ್ಲ ಲಕ್ಷಣಗಳಿವೆ ಎನ್ನಲಾಗ್ತಿದೆ. ಬಿಜೆಪಿ ಪಕ್ಷ ಬೆಂಬಲಿತ ರೈತ ಪ್ರತಿನಿಧಿಗಳು ಹೆಚ್ಚಿರುವ ಶಿರಸಿ ಎಪಿಎಂಸಿಯಲ್ಲಿ ಕಳೆದ ವರ್ಷ ಕಾಂಗ್ರೆಸ್ ಬೆಂಬಲಿತ ಸುನಿಲ್ ನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ಅವರ ಅವಧಿ ಮುಗಿದಿರುವ ಕಾರಣ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. 11 ರೈತ ಪ್ರತಿನಿಧಿಗಳು, 1 ವ್ಯಾಪಾರಸ್ಥ ಪ್ರತಿನಿಧಿ ಹಾಗೂ ಸರ್ಕಾರ ನಾಮ ನಿರ್ದೇಶನ ಮಾಡಿದಲ್ಲಿ 3 ನಾಮ ನಿರ್ದೇಶಿತರಿಂದ ಅಧ್ಯಕ್ಷ / ಉಪಾಧ್ಯಕ್ಷರು ಆಯ್ಕೆಯಾಗಲಿದ್ದಾರೆ.
ಎಪಿಎಂಸಿಯಲ್ಲಿ 7 ರೈತ ಪ್ರತಿನಿಧಿಗಳು ಬಿಜೆಪಿ ಬೆಂಬಲಿಗರಾಗಿದ್ದು, ನಾಲ್ವರು ಕಾಂಗ್ರೆಸ್ ಬೆಂಬಲಿಗರಿದ್ದಾರೆ. ಉಳಿದಂತೆ 3 ನಾಮ ನಿರ್ದೇಶಿತರು ರಾಜ್ಯ ಬಿಜೆಪಿ ಸರ್ಕಾರದಿಂದ ನೇಮಕವಾಗಲಿದ್ದು, 8 ಸದಸ್ಯರ ಬೆಂಬಲದಿಂದ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಬಿಜೆಪಿಗರಿಗೆ 10ಸದಸ್ಯರ ಬೆಂಬಲ ಸಿಗುವ ಕಾರಣ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿವುದು ನಿಚ್ಚಳವಾಗಿದೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲದೇ ಹೋದಲ್ಲಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಅ.18 ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಅಂದೇ ನಾಮಪತ್ರ ಸಲ್ಲಿಕೆ, ಹಿಂಪಡೆತ, ಘೋಷಣೆ ನಡೆಯಲಿದೆ.