ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯ ವಾಸಿಗಳ ಸಾಗುವಳಿ ಹಕ್ಕಿಗೆ ಆತಂಕ ಉಂಟು ಮಾಡುತ್ತಿದ್ದಾರೆ. ಅಲ್ಲದೆ ಜೋಯಿಡಾ, ಹಳಿಯಾಳ, ದಾಂಡೇಲಿ ಮತ್ತು ಯಲ್ಲಾಪುರ ಭಾಗಗಳಲ್ಲಿ ಅರಣ್ಯ ವಾಸಿ ಮತ್ತು ಜನಸಾಮಾನ್ಯರ ಮೇಲೆ ಅರಣ್ಯ ಸಿಬ್ಬಂದಿ ಮಾನಸಿಕ ಮತ್ತು ದೈಹಿಕ ದೌರ್ಜನ್ಯವೆಸಗುತ್ತಿರುವುದನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಬಲವಾಗಿ ಖಂಡಿಸಿದೆ.
ಸೋಮವಾರ ಸ್ಥಳೀಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ ಅವರಿಗೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗ ಮನವಿ ನೀಡಿ ಅರಣ್ಯ ಸಿಬ್ಬಂದಿಯ ಕಾನೂನು ಬಾಹಿರ ಕೃತ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ದೌರ್ಜನ್ಯ ಮುಂದುವರೆದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜೋಯಿಡಾ, ದಾಂಡೇಲಿ, ಹಳಿಯಾಳ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಏಕಾಏಕಿಯಾಗಿ ಜನಸಾಮಾನ್ಯರು ಮತ್ತು ಅರಣ್ಯವಾಸಿಗಳ ಮನೆಗೆ ನುಗ್ಗಿ ಮಹಿಳೆ ಇರುವ ಸಂದರ್ಭದಲ್ಲಿ ಅಮಾನವೀಯತೆಯಿಂದ ವರ್ತಿಸುವ ಅರಣ್ಯ ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಿಯೋಗವು ಒತ್ತಾಯಿಸಿತು.