ಕಾರವಾರ: ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ಉತ್ತರಕನ್ನಡ ಜಿಲ್ಲೆಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಯೊಂದಿಗೆ ವಿಡಿಯೋ ಸಂವಾದ ನಡೆಸಿ ಬಳಿಕ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅದರಂತೆ ನಮ್ಮ ಜಿಲ್ಲೆಯ ಪರಿಸ್ಥಿತಿಯನ್ನೂ ಅಧಿಕಾರಿಗಳ ತಂಡ ಸಿಎಂ ಜತೆ ವಿವರವಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದೆಯಾದರೂ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಈಗಾಗಲೇ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲಾಗುತ್ತಿದೆ. ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಭಟ್ಕಳದಲ್ಲಿ ಮಾತ್ರ ಮಧ್ಯಾಹ್ನ 2 ಗಂಟೆ ಬಳಿಕ ಅರ್ಧ ದಿನ ಜಿಲ್ಲಾಡಳಿತದಿಂದ ಲಾಕ್‌ಡೌನ್ ಜಾರಿಯಲ್ಲಿದೆ ಎಂದು ಹೇಳಿದರು.
ಕೊರೊನಾ ಸೋಂಕಿನಿಂದ ಮೃತರಾದವರ ಅಂತಿಮ ಸಂಸ್ಕಾರದ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ವಿವಾದವಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಪ್ರತ್ಯೇಕವಾಗಿ ಸ್ಥಳ ಗುರುತಿಸಿ ಓರ್ವರ ಅಂತಿಮ ಸಂಸ್ಕಾರ ಮಾಡಲಾಗಿದೆ. ಜನರು ಸಣ್ಣ ವಿಚಾರಗಳನ್ನು ರಾಜಕೀಯವಾಗಿ ಬಳಸಿ ಜಿಲ್ಲಾಡಳಿತಕ್ಕೆ ಸಮಸ್ಯೆ ಮಾಡುವುದು ಸರಿಯಲ್ಲ. ಯಾರೇ ಮೃತರಾದರೂ ಅಂತಿಮ ಸಂಸ್ಕಾರ ಮಾಡೋದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಅದನ್ನು ಅಧಿಕಾರಿಗಳು, ಸಿಬ್ಬಂದಿ ಮಾಡಲಿದ್ದು ಸಹಕಾರ ನೀಡುವಂತೆ ತಿಳಿಸಿದರು.
ಭಟ್ಕಳ ಹೊರತುಪಡಿಸಿ ಮಧ್ಯಾಹ್ನ 2 ಗಂಟೆ ಬಳಿಕ ಜಿಲ್ಲೆಯಾದ್ಯಂತ ಜನರು ಸ್ವಯಂ ಘೋಷಿತ ಬಂದ್ ಮಾಡಿದ್ದಾರೆ. ಹೀಗೆ ಬಂದ್ ನಡೆಸುವುದಕ್ಕೆ ನಾವು ಬೆಂಬಲ ಹಾಗೂ ಅಗತ್ಯ ಸಹಾಯ ಒದಗಿಸುತ್ತೇವೆ. ಭಟ್ಕಳದಲ್ಲಿ ಹೊರರಾಜ್ಯದಿಂದ ಹಾಗೂ ಹೊರ ದೇಶದಿಂದ ಬಂದವರಿಂದ ಅತಿ ಹೆಚ್ಚು ಪ್ರಕರಣ ಪತ್ತೆಯಾಗಲು ಕಾರಣವಾಗಿದೆ. ಈಗಾಗಲೇ ಭಟ್ಕಳದಲ್ಲಿ ಮತ್ತಷ್ಟು ಹೆಚ್ಚು ಟೆಸ್ಟ್‌ಗಳನ್ನು ವೇಗದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಜನರು ಸಮಸ್ಯೆಯಾದಲ್ಲಿ ನೆರವಾಗಿ ಜಿಲ್ಲಾಡಳಿತದ ಗಮನಕ್ಕೆ ತರಬಹುದು ಎಂದು ಹೇಳಿದರು.
ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗಾಗಿ 2,500 ಬೆಡ್ ತಯಾರಾಗಿದೆ. ಮೃತಪಟ್ಟವರ ಸೋಂಕಿನ ಪರಿಶೀಲನೆಯನ್ನು ಎರಡು ಗಂಟೆಯಲ್ಲಿ ನಡೆಸಲು ಸೂಚಿಸಲಾಗಿದೆ. ಬ್ಯಾಂಕ್ ಹಾಗೂ ಸಂಸ್ಥೆಗಳ ಸಿಬ್ಬಂದಿ ರಿಪೋರ್ಟ್ ಕೂಡಾ ಶೀಘ್ರದಲ್ಲಿ ಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ 13 ಆ್ಯಂಬುಲೆನ್ಸ್‌ಗಾಗಿ ಬೇಡಿಕೆಯಿಟ್ಟಿದ್ದು, ಸಿಎಂರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. ಶಾಸಕರ ಅನುದಾನದಡಿ ಆಯಾ ಕ್ಷೇತ್ರದಲ್ಲಿ ತಲಾ 2 ಆ್ಯಂಬುಲೆನ್ಸ್ ಖರೀದಿಸಲಾಗುವುದು ಎಂದರು.
ಇನ್ನು ಗಂಭೀರ ಸ್ಥಿತಿಯಲ್ಲಿರುವ ಶಿರಸಿ, ಸಿದ್ಧಾಪುರವರಿಗೆ ಶಿವಮೊಗ್ಗ ಮತ್ತು ಮುಂಡಗೋಡ, ಹಳಿಯಾಳ ಮುಂತಾದ ಪ್ರದೇಶದ ಜನರಿಗೆ ಹುಬ್ಬಳ್ಳಿಗೆ ತೆರಳಲು ಸಿಎಂ ಅನುಮತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.