ಕಾರವಾರ: ದೇಶದ ಪ್ರತಿಷ್ಠಿತ ನೌಕಾನೆಲೆಗಳಲ್ಲಿ ಒಂದಾದ ಕಾರವಾರದ ಕದಂಬ ನೌಕಾನೆಲೆ ಹಾಗೂ ವಜ್ರಕೋಶ್‌ನ ಸುತ್ತಮುತ್ತ 4 ಕಿ.ಮೀ ವ್ಯಾಪ್ತಿಯನ್ನು ಭದ್ರತಾ ದೃಷ್ಟಿಯಿಂದ ನೋ ಫ್ಲೈ ಝೋನ್ (No Fly Zone) ಎಂದು ಘೋಷಿಸಲಾಗಿದೆ.
ಈ ಪ್ರದೇಶವು ಸೂಕ್ಷ್ಮ ಹಾಗೂ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ್ದರಿಂದ ನೌಕಾನೆಲೆ ಈ ಕ್ರಮ ಕೈಗೊಂಡಿದೆ. ಹಾಗಾಗಿ, ಇನ್ನು ಮುಂದೆ ನೌಕಾನೆಲೆ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅನುಮತಿ ಪಡೆಯದೇ ಯಾವುದೇ ರೀತಿಯ ಡ್ರೋನ್ ಹಾರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ನೌಕಾನೆಲೆ ಪ್ರಕಟಣೆಯಲ್ಲಿ ತಿಳಿಸಿದೆ.
ನೌಕಾನೆಲೆ ವ್ಯಾಪ್ತಿಯಲ್ಲಿ ವೈಮಾನಿಕ ಡ್ರೋನ್‌ಗಳ ಬಳಕೆಯನ್ನು ಗೃಹ ಸಚಿವಾಲಯ ಕಾಲ ಕಾಲಕ್ಕೆ ತಿದ್ದುಪಡಿ ಮಾಡಿ ಹೊರಡಿಸುವ ಮಾರ್ಗಸೂಚಿಗಳ ಅನ್ವಯ ನಿಯಂತ್ರಿಸಲಾಗುತ್ತದೆ.
ಓದಿ : ತುಳು ಲಿಪಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರ್ಪಡೆಗೊಳಿಸುವ ಕ್ರಮಕ್ಕೆ ಸಚಿವ ಲಿಂಬಾವಳಿ ಅನುಮೋದನೆ
ನೌಕಾನೆಲೆ ಪ್ರದೇಶದಲ್ಲಿ ಡ್ರೋನ್ ಬಳಸಬೇಕಾದರೆ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ)ನ ಅನುಮೋದನೆಯನ್ನು www.dgca.nic.in ವೆಬ್ಸೈಟ್ ಮೂಲಕ ಪಡೆಯಬೇಕು. ಡ್ರೋನ್‌ನ ನಿಗದಿತ ಕಾರ್ಯಾಚರಣೆಗೆ ಕನಿಷ್ಠ ಎರಡು ವಾರಗಳ ಮೊದಲು ಅನುಮೋದನೆ ಪತ್ರದ ಪ್ರತಿಯನ್ನು ಕರ್ನಾಟಕ ನೌಕಾ ಪ್ರದೇಶದ ಪ್ರಧಾನ ಕಚೇರಿಗೆ ಸಲ್ಲಿಸಬೇಕು.
ನೌಕಾನೆಲೆ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಇಲ್ಲದೇ ಹಾರಾಟ ನಡೆಸುವ ಯಾವುದೇ ರೀತಿಯ ವೈಮಾನಿಕ ಡ್ರೋನ್‌ಗಳು ಅಥವಾ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ವಶಕ್ಕೆ ಪಡೆದುಕೊಳ್ಳುವ ಅಥವಾ ನಾಶಪಡಿಸುವ ಅಧಿಕಾರವನ್ನು ಭಾರತೀಯ ನೌಕಾಪಡೆ ಹೊಂದಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಆಪರೇಟರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೌಕಾನೆಲೆ ಹೇಳಿದೆ.