ಭಟ್ಕಳ: ನಗರದ ಸ್ಥಳೀಯ ನಾಗರಿಕರು ಚರಂಡಿ ಕಾಮಗಾರಿಗೆ ತಡೆಯೊಡ್ಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೂ ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರದಂದು ಮುರ್ಡೇಶ್ವರದ ರಥಬೀದಿಯಲ್ಲಿ ನಡೆದಿದೆ.
ವಿಶ್ವ ಪ್ರಸಿದ್ಧ ಮುರ್ಡೇಶ್ವರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರ ದಟ್ಟಣೆ, ಪಾರ್ಕಿಂಗ್ ಅವ್ಯವಸ್ಥೆಗೆ ರಸ್ತೆಗಳು ಇಕ್ಕಟ್ಟಾಗಿರುವುದೂ ಮುಖ್ಯ ಕಾರಣವಾಗಿದೆ. ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುವ ಎಡ ಭಾಗದ ಗ್ರಾಮ ಪಂಚಾಯತ್ ಮಾವಳ್ಳಿ-2 ಸರ್ಕಾರಿ ಜಾಗದ ಸರ್ವೇ ನಂ. 23ರಲ್ಲಿ ಗಡಿ ಗುರುತು ಮಾಡಿ ರಸ್ತೆಗೆ ಬಳಸಿಕೊಳ್ಳುವುದರ ಬದಲು ಹಳೆಯ ರಸ್ತೆಯಿದ್ದಷ್ಟೇ ಗುರುತು ಮಾಡಿ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ಅಂಗಡಿಕಾರರಿಗೆ ತೀವ್ರವಾದ ಮಾತಿನ ಚಕಮಕಿ ಉಂಟಾಗಿ, ಪೊಲೀಸ್ ಮಧ್ಯ ಪ್ರವೇಶಿಸಿದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ನಂತರ ಸ್ಥಳಕ್ಕೆ ಪಂಚಾಯತ್ ಪಿಡಿಒ ಬರುವ ತನಕ ಕಾಮಗಾರಿಗೆ ತಡೆಯೊಡ್ಡಿದ್ದು, ನಂತರ ಸ್ಥಳಕ್ಕಾಗಮಿಸಿದ ಪಿಡಿಒ ಸ್ಥಳದಲ್ಲೇ ಸಹಾಯಕ ಆಯುಕ್ತರಿಗೆ ದೂರವಾಣಿ ಕರೆಯ ಮೂಲಕ ಘಟನೆ ಬಗ್ಗೆ ತಿಳಿಸಿದರು. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಡಿಸೆಂಬರ್ 11ರ ನಂತರ ಸಭೆ ಕರೆದು ಈ ವಿಷಯ ಪ್ರಸ್ತಾಪಿಸೋಣ ಅಲ್ಲಿಯವರೆಗೆ ಈ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು.
ನಂತರ ಸಾರ್ವಜನಿಕರು ರಸ್ತೆ ಅಗಲೀಕರಣದ ಕುರಿತು ಪಿಡಿಒ ನಟರಾಜ ಅವರಿಗೆ ಸ್ಥಳದಲ್ಲಿಯೇ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರ ಪರವಾಗಿ ಮಾತನಾಡಿದ ಶ್ರೀಧರ್ ನಾಯ್ಕ, ಮುರ್ಡೇಶ್ವರದ ಕಲ್ಯಾಣಿ ಪಕ್ಕದಲ್ಲಿನ ರಸ್ತೆಯ ಅಭಿವೃದ್ಧಿ ಮಾಡುತ್ತಿದ್ದು, ಹಿಂದಿನ ರಸ್ತೆಯಲ್ಲೇ ಕಾಮಗಾರಿ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರು, ಅಂಗಡಿಕಾರರು ಮುಂತಾದವರು ಉಪಸ್ಥಿತರಿದ್ದರು.