ಶಿರಸಿ : ಕೇಂದ್ರೀಯ ತನಿಖಾ ದಳದ (NIA) ಸಿಬ್ಬಂದಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿಗೆ ಶನಿವಾರ ಸಂಜೆಯ ವೇಳೆಗೆ ಭೇಟಿ ನೀಡಿದ್ದು, ಇಬ್ಬರು ಸಿಬ್ಬಂದಿ ತಾಲೂಕಿನ ಅರೆಕೊಪ್ಪಕ್ಕೆ ಭೇಟಿ ನೀಡಿ ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎನ್ಐಎ ಕಳೆದ ಎರಡು ದಿನಗಳ ಹಿಂದಷ್ಟೇ ದೇಶದ ವಿವಿಧ ಕಡೆಗಳಲ್ಲಿ 9 ಉಗ್ರರನ್ನು ಬಂಧಿಸಿತ್ತು. ನಂತರ ಅವರು ಶಿರಸಿಗೆ ಭೇಟಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರು ಸಿಬ್ಬಂದಿ ಹಾಗೂ ಒಬ್ಬ ಡ್ರೈವರ್ ಸೇರಿ ಮೂವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಶನಿವಾರ ಸಂಜೆ 5 ಗಂಟೆಗೆ ಶಿರಸಿಗೆ ಬಂದಿದ್ದ ಎನ್ಐಎ ಸಿಬ್ಬಂದಿ, ಸ್ಥಳೀಯ ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸಿದರು ಎನ್ನಲಾಗಿದೆ. ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಸಿಮ್ ಬಳಕೆಯಾದ ಹಿನ್ನೆಲೆಯಲ್ಲಿ ಅದರ ಕುರಿತು ಇಲ್ಲಿನ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.