ಭಟ್ಕಳ: ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ, ಕಳೆದ ಎರಡೂವರೆ ತಿಂಗಳಿನಿಂದ ಮುಚ್ಚಿದ್ದ ಪ್ರಸಿದ್ಧ ಮುರುಡೇಶ್ವರ ಶಿವನ ದೇವಾಲಯವನ್ನು ಇಂದು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ.
ದೇಗುಲಗಳ ಬಾಗಿಲು ಸೋಮವಾರದಿಂದ ತೆರೆಯುವ ಸುದ್ದಿ ತಿಳಿದು ಭಕ್ತರ ಮನಸ್ಸಿನಲ್ಲಿ ಧನ್ಯತಾಭಾವ ಮೂಡಿದ್ದು, ದೇವಾಲಯದ ಬಳಿ ಬಂದು ಬಾಗಿಲ ಬಳಿಯೇ ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡಿ ಒಳ ಪ್ರವೇಶಿಸುತ್ತಿದ್ದರು.
ಮುರ್ಡೇಶ್ವರದ ಶಿವನ ದೇವಾಲಯ ಬೆಳಗ್ಗೆ 7:30 ಕ್ಕೆ ಬಾಗಿಲು ತೆರೆದಿದೆ. ಮಾಸ್ಕ್ ಇಲ್ಲದೆ ದೇವರ ದರ್ಶನಕ್ಕೆ ಬಂದರೆ ಅಂಥವರನ್ನು ದೇಗುಲದ ಪ್ರವೇಶ ದ್ವಾರದಿಂದಲೇ ಹೊರ ಕಳುಹಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ದರ್ಶನಕ್ಕಷ್ಟೇ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.
ದೇವಾಲಯಕ್ಕೆ ಸಹಾಯಕ ಆಯುಕ್ತೆ ಭೇಟಿ ನೀಡಿ ಪರಿಶೀಲನೆ: ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಸಹಾಯಕ ಆಯುಕ್ತೆ ದೇವಸ್ಥಾನಕ್ಕೆ ಭೇಟಿ ನೀಡಿ ಮೊದಲು ದೇವರ ದರ್ಶನ ಪಡೆದುಕೊಂಡು ದೇವಾಲಯಕ್ಕೆ ಬರುವ ಪ್ರವಾಸಿಗರಿಗೆ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಗೂ ಸಾಮಾಜಿಕ ಅಂತ ಕಾಪಾಡುವಂತೆ ಸೂಚಿಸಿದ್ದಾರೆ.
ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರು 75 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಹಾಗೂ 1 ಸುತ್ತಿನ ಲಸಿಕೆ ಪಡೆದ ವರದಿ ತರುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗೂ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರ ವಾಹನ ಸಂಖ್ಯೆ ಮತ್ತು ಅವರ ಮಾಹಿತಿಯನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: 'ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ, ಮಹಿಳೆ ಬಗ್ಗೆ ಗೌರವಯುತವಾಗಿ ಮಾತನಾಡಬೇಕು'