ಭಟ್ಕಳ (ಉತ್ತರ ಕನ್ನಡ): ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಹಿತದೃಷ್ಟಿಯಿಂದಾಗಿ ಮುರುಡೇಶ್ವರ ಸಮುದ್ರ ತೀರಕ್ಕೆ ತೆರಳುವ ಎರಡು ಮಾರ್ಗಗಳನ್ನು ಮುಂದಿನ 4 ತಿಂಗಳವರರೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಲಾಗಿದೆ. ಕಳೆದ ಎರಡು ದಿನಗಳಲ್ಲಿ ಮುರುಡೇಶ್ವರಕ್ಕೆ ಬಂದ ಇಬ್ಬರು ಪ್ರವಾಸಿಗರು ಇಲ್ಲಿನ ಲೈಫ್ ಗಾರ್ಡ್ಗಳ ಮಾತು ಧಿಕ್ಕರಿಸಿ ಸಮುದ್ರಕ್ಕಿಳಿದು ನೀರು ಪಾಲಾಗಿದ್ದರು. ಬಿಪೊರ್ ಜೋಯ್ ಸೈಕ್ಲೋನ್ನಿಂದ ಸಮುದ್ರದ ಅಲೆಗಳ ಉಬ್ಬರ ಇಳಿತ ಹೆಚ್ಚಾಗಲಿದೆ ಹಾಗೂ ಮಳೆಗಾಲ ಹಿನ್ನೆಲೆಯಲ್ಲಿ ಸಮುದ್ರ ತೀರಕ್ಕೆ ಪ್ರವಾಸಿಗರು ಈಜಲು ಹಾಗೂ ಸಮುದ್ರ ತೀರಕ್ಕೆ ಸಂಚರಿಸಲು ನಿರ್ಬಂಧ ಹೇರಲಾಗಿದೆ.
ಈ ಕುರಿತು ಮಾತನಾಡಿದ ಮುರುಡೇಶ್ವರ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ, ''ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ದೇವರ ದರ್ಶನ ಮುಗಿಸಿ ಸಮುದ್ರಕ್ಕೆ ಈಜಲು ಬಂದ ವೇಳೆ ನಮ್ಮ ಲೈಫ್ ಗಾರ್ಡ್ಗಳ ಮಾತು ಕೇಳದ ಕಾರಣ ಸಮುದ್ರದಲ್ಲಿ ಕೊಚ್ಚಿಕೊಂದು ಹೋಗಿ ಜೀವ ಕಳೆದುಕೊಂಡಿದ್ದರು. ಸದ್ಯ ಮಳೆಗಾಲ ಶುರುವಾಗಿದೆ. ಜಿಲ್ಲೆಗೆ ಚಂಡಮಾರುತ ಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಸಮುದ್ರ ತೀರಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಸಮುದ್ರಕ್ಕೆ ತೆರಳುವ ಎರಡು ಮಾರ್ಗಗಳನ್ನು ಬಂದ್ ಮಾಡಿದ್ದೇವೆ. ಮುಂದಿನ ನಾಲ್ಕು ತಿಂಗಳು ಸಮುದ್ರ ತೀರದಲ್ಲಿ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಕ್ಟೋಬರ್ ತಿಂಗಳಿಂದ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಕರಾವಳಿ ಭಾಗದಲ್ಲಿ ಎಚ್ಚರಿಕೆ: ಬಿಪೊರ್ ಜೋಯ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಹಾಗೂ INCOIS ವತಿಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ 'ಹೈ ವೇವ್ ಅಲರ್ಟ್' ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆ 42 ಕಿಲೋ ಮೀಟರ್ನಷ್ಟು ಉದ್ದದ ಕರಾವಳಿ ತೀರಯನ್ನು ಹೊಂದಿದೆ. ಇತ್ತೀಚೆಗೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಬೆನ್ನಲ್ಲೇ ಪಶ್ಚಿಮ ಕರಾವಳಿಗೆ 'ಬಿಪೊರ್ ಜೋಯ್' ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಈ ಚಂಡಮಾರುತದ ತೀವ್ರತೆಯ ಎಫೆಕ್ಟ್ನಿಂದ ಸಮುದ್ರದ ಅಲೆಗಳ ಎತ್ತರ 3ರಿಂದ 4 ಮೀಟರ್ನಷ್ಟು ಇರಲಿದೆ. ಕರಾವಳಿ ಭಾಗದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದಿಂದ ಮುಂದಿನ 5 ದಿನಗಳವರೆಗೆ ಅಂದರೆ, ಜೂ.19ರ ವರೆಗೆ ಕರಾವಳಿ ತೀರ ಪ್ರದೇಶಗಳಲ್ಲಿ ಸ್ಥಳೀಯರು, ಪ್ರವಾಸಿಗರು, ಮೀನುಗಾರರು ಸಮುದ್ರಕ್ಕೆ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ. ಸಮುದ್ರದ ಸಮೀಪದಲ್ಲಿ ಓಡಾಡುವುದು ಮತ್ತು ಆಟವಾಡುವುದನ್ನು ಕೂಡ ನಿಷೇಧ ಮಾಡಲಾಗಿದೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ 24/7 ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ-1077/0824- 2442590ಗೆ ಕರೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.