ಭಟ್ಕಳ : ಮುರ್ಡೇಶ್ವರದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣದ ಕಾಮಗಾರಿ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳುವಂತೆ, ಮಾವಳ್ಳಿ-1ಮತ್ತು 2 ವ್ಯಾಪ್ತಿಯ ಸ್ಥಳೀಯರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮುರ್ಡೇಶ್ವರದ ಪುಷ್ಕರಣಿಯ ಬಲಭಾಗದ ರಸ್ತೆ ಈಗಾಗಲೇ ಕಿರಿದಾಗಿದೆ. ಅದೇ ಹಳೆಯ ರಸ್ತೆ ಗುರುತಿನಲ್ಲಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ಮುರ್ಡೇಶ್ವರ ಮಹಾರಥೋತ್ಸವದ ಸಂಚಾರಕ್ಕೆ ಪ್ರತಿ ವರ್ಷ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ತಿಳಿದಿದ್ದರೂ ಕೂಡ ಹಳೆಯ ಗುರುತಿನ ಪ್ರಕಾರ ರಸ್ತೆ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮುರ್ಡೇಶ್ವರ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಹೋಗುವ ಮಾರ್ಗದ ಎಡಬದಿಯಲ್ಲಿ ಗ್ರಾಪಂ ಮಾವಳ್ಳಿ-2 ರ ಸರ್ಕಾರಿ ಜಮೀನು ಇದೆ. ಇದನ್ನು ಗಡಿ ಗುರುತು ಮಾಡಿ ರಸ್ತೆಗೆ ಬಳಸಿಕೊಳ್ಳುವುದರ ಬದಲು ಹಳೆಯ ರಸ್ತೆ ಇರುವಷ್ಟೇ ಜಾಗದಲ್ಲಿ ಕಾಮಗಾರಿ ನಡೆಸಲು ಅಧಿಕಾರಿಗಳು ಗಡಿ ಗುರುತು ಹಾಕಿ ಹೋಗಿದ್ದಾರೆ. ಇಷ್ಟು ವರ್ಷ ಮುರ್ಡೇಶ್ವರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಸಾಕಷ್ಟು ತೊಂದರೆಯನ್ನು ಪ್ರವಾಸಿಗರು ಹಾಗೂ ಸಾರ್ವಜನಿಕರು ಅನುಭವಿಸುತ್ತಿದ್ದರು. ಈಗ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಊರಿನ ಜನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಹಳೆಯ ರಸ್ತೆ ಅಳತೆಯಲ್ಲಿ ಹೊಸ ರಸ್ತೆ ನಿರ್ಮಾಣ ಮಾಡಲು ಮುಂದಾಗಿರಿವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಪುಷ್ಕರಣಿಯ ಪಕ್ಕದಲ್ಲಿರುವ ಮಾವಳ್ಳಿ-2 ಗ್ರಾಮ ಪಂಚಾಯತ್ ಸರ್ವೆ ನಂಬರ್ 23ರಲ್ಲಿ, 5 ಗುಂಟೆ ಸರ್ಕಾರಿ ಜಮೀನನ್ನು ರಸ್ತೆಗೆ ಬಳಸಿಕೊಳ್ಳಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಸಹಾಯಕ ಆಯುಕ್ತರಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.