ಶಿರಸಿ: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆತ್ತರು ಹರಿದಿದೆ. ಜಿಲ್ಲೆಯ ಶಿರಸಿ ನಗರದಲ್ಲಿ ಯುವಕನೋರ್ವನನ್ನು ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿದೆ.
ಇಂದು ಬೆಳಿಗ್ಗೆ ಕೊಲೆ ಬೆಳಕಿಗೆ ಬಂದಿದ್ದು, ಅಸ್ಲಾಂ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ರಾಜಕೀಯ ದ್ವೇಷದಿಂದ ಕೊಲೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನು ಘಟನೆ ನಡೆಯುತ್ತಿದ್ದಂತೆ ಜಿಲ್ಲೆಯ ಹಿರಿಯ ಪೊಲೀಸ್ ಆಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ರಾಜಕೀಯ ದ್ವೇಷ ಕೊಲೆಗೆ ಕಾರಣವಾಯಿತೇ?
ನಿನ್ನೆ ರಾತ್ರಿ ಕಸ್ತೂರ ಬಾ ನಗರದಲ್ಲಿ ಗಲಾಟೆಯೊಂದು ನಡೆದಿತ್ತಂತೆ. ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅನೀಶ್ ಹಾಗೂ ಮತ್ತೊಂದು ಗುಂಪಿನ ನಡುವೆ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಅನೀಶ್ಗೆ ಚಾಕು ಇರಿತವಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದೆ. ಇನ್ನು ಅನೀಶ್ ಹಾಗೂ ಕೊಲೆಯಾದ ಅಸ್ಲಾಂ ಸ್ನೇಹಿತರಾಗಿದ್ದು, ರಾತ್ರಿ ಗಲಾಟೆ ವೇಳೆ ಅಸ್ಲಾಂ ಸಹ ಇದ್ದ ಎನ್ನಲಾಗಿದೆ. ಅನೀಶ್ ಮೇಲೆ ಹಲ್ಲೆಯಾದ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಂಡಿತ್ತು. ಆದ್ರೆ ಇಂದು ಬೆಳಿಗ್ಗೆ ಕಸ್ತೂರ ಬಾ ನಗರದ ಮೈದಾನವೊಂದರಲ್ಲಿ ಅಸ್ಲಾಂನ ಶವ ಪತ್ತೆಯಾಗಿದೆ. ಬೆಳಿಗ್ಗೆ ವಾಯು ವಿಹಾರಕ್ಕೆ ಎಂದು ಹೋದವರು ಶವವನ್ನ ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಅಸ್ಲಾಂನನ್ನ ರಾತ್ರಿ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಕೊಲೆಯಾದ ಸ್ಥಳದಲ್ಲಿಯೇ ರಾಡ್ ಸಹ ಪತ್ತೆಯಾಗಿದೆ.
ಕೊಲೆಯಾದ ಅಸ್ಲಾಂ ಶಿರಸಿಯ ಕಸ್ತೂರ ಬಾ ನಗರದ ನಿವಾಸಿಯಾಗಿದ್ದು, ನಗರದ ನಟರಾಜ ರಸ್ತೆಯಲ್ಲಿ ಮೊಬೈಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ರಾಜಕೀಯವಾಗಿ ಎಲ್ಲೂ ಸರಿಯಾಗಿ ಗುರಿತಿಸಿಕೊಳ್ಳದಿದ್ದರೂ ಕೆಲವು ಬಾರಿ ಎಸ್ಡಿಪಿಐ ಸಂಘಟನೆಯಲ್ಲಿ ಅಸ್ಲಾಂ ಗುರುತಿಸಿಕೊಂಡಿದ್ದನಂತೆ.
ರಾತ್ರಿ 9:30ರ ವೇಳೆಯಲ್ಲಿ ಅಂಗಡಿಯಿಂದ ಸ್ನೇಹಿತನೋರ್ವನ ಜೊತೆ ಹೊರಟಿದ್ದನಂತೆ. ಅಂಗಡಿ ಮಾಲೀಕನ ಬಳಿ ಕೆಲಸವಿದೆ ಎಂದು ಹೇಳಿ ಕಸ್ತೂರ ಬಾ ನಗರಕ್ಕೆ ಬಂದಿದ್ದನಂತೆ. ಆದ್ರೆ ಬೆಳಿಗ್ಗೆ ಶವವಾಗಿ ಅಸ್ಲಾಂ ಸಿಕ್ಕಿದ್ದು, ಗಲಾಟೆಯಲ್ಲಿಯೇ ಅಸ್ಲಾಂನನ್ನ ಸಾಯಿಸಲಾಗಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಇನ್ನು ಕೊಲೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ, ಕೊಲೆಯ ಹಿಂದಿನ ಕಾರಣ ಹಾಗೂ ಕೊಲೆ ಯಾರು ಮಾಡಿದ್ದಾರೆ ಎಂದು ತನಿಖೆ ಪ್ರಾರಂಭಿಸಿದ್ದಾರೆ.
ಈಗಾಗಲೇ ಅಸ್ಲಾಂ ತಂದೆ ಮೃತರಾದ್ದು, ಕೆಲ ವರ್ಷದಿಂದ ಮೊಬೈಲ್ ಅಂಗಡಿಯಲ್ಲಿ ದುಡಿದು ಜೀವನ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈ ಕೊಲೆಯಿಂದ ಇಡೀ ಕುಟುಂಬವೇ ಕಂಗಾಲಾಗಿದೆ. ಇದರಿಂದ ಯುವಕನ ಕುಟಂಬಕ್ಕೆ ನ್ಯಾಯ ದೊರಕಿಸಿಕೊಡಲು ಆದಷ್ಟು ಬೇಗ ಕೊಲೆ ಮಾಡಿದವರನ್ನ ಪೊಲೀಸರು ಹಿಡಿಯುವ ಮೂಲಕ ಕೊಲೆಯ ಹಿಂದೆ ರಾಜಕೀಯ ಕಾರಣ ಇದೆಯೇ ಅಥವಾ ಇನ್ಯಾವ ಕಾರಣ ಇದೆ ಎನ್ನುವುದನ್ನು ಪತ್ತೆ ಮಾಡಬೇಕಿದೆ.