ಭಟ್ಕಳ: ಈ ಬಾರಿ ಗಂಭೀರವಾಗಿ ಆರೋಗ್ಯ ಸಮೀಕ್ಷೆ ನಡೆಸಬೇಕಾಗಿದ್ದು, ಪುರಸಭೆ ಸದಸ್ಯರು ಇದರ ಜವಾಬ್ದಾರಿ ಹೊತ್ತು ಸಹಕರಿಸಬೇಕಿದೆ ಎಂದು ಪುರಸಭೆ ಸಹಾಯಕ ಆಯುಕ್ತ ಭರತ ಎಸ್. ಹೇಳಿದರು.
ಇಲ್ಲಿನ ಅರ್ಬನ್ ಬ್ಯಾಂಕ್ ಹಾಲ್‍ನಲ್ಲಿ ನಡೆದ ಆರೋಗ್ಯ ಸಮೀಕ್ಷೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಆಯಾ ಪುರಸಭೆ ಸದಸ್ಯರು ತಮ್ಮ ವಾರ್ಡ್ಗಳಲ್ಲಿನ ಮನೆಯ ಸದಸ್ಯರ ಆರೋಗ್ಯ ತಪಾಸಣೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.
ತಹಶೀಲ್ದಾರ್ ಎಸ್. ರವಿಚಂದ್ರ ಮಾತನಾಡಿ, ತಾಲೂಕು ‘ಗ್ರೀನ್ ಝೋನ್ ಹೋಗಬೇಕಾದ ಸಂದರ್ಭದಲ್ಲಿ ಇನ್ನೊಂದು ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ನಿರ್ಣಯ ತೆಗೆದುಕೊಂಡಿದ್ದೇವೆ. ಹೆಲ್ತ್ ಸರ್ವೆ ಪಡೆಯಲು ಹೋದ ವೇಳೆ ಕಾರಣಾಂತರಗಳಿಂದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಐಜಿಪಿ, ಸಂಸದರು ಭಟ್ಕಳಕ್ಕೆ ಬಂದು ಸೂಕ್ತ ಸೂಚನೆ ನೀಡಿದ್ದು, ಅದರಂತೆ ಕಾರ್ಯೋನ್ಮುಖರಾಗಲಿದ್ದೇವೆ. ಈ ಬಗ್ಗೆ ಪುರಸಭೆ ಸದಸ್ಯರು ಅವರ ಸಹಕಾರದ ಜೊತೆಗೆ ಕರ್ತವ್ಯ ನಿಭಾಯಿಸಬೇಕಿದೆ ಎಂದರು. ಆರೋಗ್ಯ ವಿಭಾಗದ ನೋಡಲ್ ಅಧಿಕಾರಿ ಡಾ. ಶರದ ನಾಯಕ ಮಾತನಾಡಿ, ಈಗಾಗಲೇ 4 ಬಾರಿ ಸಮೀಕ್ಷೆ ಆಗಿದ್ದರೂ ಸಹ ಸರಿಯಾದ ಮಾಹಿತಿ ಸಿಕ್ಕಿಲ್ಲ. ಚಿಕ್ಕ ಪುಟ್ಟ ಅನಾರೋಗ್ಯವಿದ್ದರೂ ಸಹ ಅದರ ಬಗ್ಗೆ ಮಾಹಿತಿ ನೀಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಈ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಲಿದ್ದು, ಈ ಹಿನ್ನೆಲೆ ಹೆಚ್ಚಿನ ಕಾಳಜಿ ವಯಸ್ಸಾದವರ ಬಗ್ಗೆ ಇಡಬೇಕು. ಸಕ್ಕರೆ ಕಾಯಿಲೆ ಸೇರಿ ಇನ್ಯಾವುದೇ ರೀತಿ ಕಾಯಿಲೆ ಇದ್ದರೆ ಸಮೀಕ್ಷೆಗೆ ಬಂದ ವೇಳೆ ತಿಳಿಸಿ ತಾಲೂಕಾಡಳಿತಕ್ಕೆ ಸಹಕರಿಸಬೇಕು ಎಂದರು.