ಭಟ್ಕಳ (ಉತ್ತರ ಕನ್ನಡ) : ಹೊನ್ನಾವರದಲ್ಲಿ ಬಂದರು ಅಭಿವೃದ್ಧಿಗೆ ಮುಂದಾದಾಗ ಇದೇ ಜಿಲ್ಲೆಯ ಜನರು ಗಲಾಟೆ ಮಾಡಿದರು. ಪರಿಸರದ ಹೆಸರಿನಲ್ಲಿ ಮತ್ತು ಇಲ್ಲದ ಆಮೆಯ ಹೆಸರಿನಲ್ಲಿ ಪೋರ್ಟ್ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.
ಶುಕ್ರವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ನಡೆಸಿದರು. ಈ ವೇಳೆ ಮಾತನಾಡಿದ ಅವರು, ಏರ್ಪೋಟ್ ಕಾಮಗಾರಿಗೂ ಸಹ ಕಲ್ಲು ಹಾಕಿರುವ ಜನರು ಬೇರೆ ಯಾರೋ ಅಲ್ಲ. ಸೋಗಲಾಡಿ ಅಭಿವೃದ್ಧಿಯ ಬಗ್ಗೆ ಮಾತನಾಡುವವರೇ ಆಗಿದ್ದಾರೆ. ಯಾರೋ ಪಾಪದ ಅಥವಾ ಪರದೇಶಿ ಜನರಲ್ಲ. ಅಂದು ಹೊನ್ನಾವರ ಬಂದರು ಆಗಿದ್ದರೆ ಉತ್ತರ ಕನ್ನಡ ಜಿಲ್ಲೆಗೆ ಶಕ್ತಿ ಬರುತ್ತಿತ್ತು ಎಂದರು
ಮಂಕಿಯಲ್ಲಿ ಮೀನುಗಾರಿಕಾ ಹಾರ್ಬರ ಪೋರ್ಟ್ ಆಗುವ ಸಾಧ್ಯತೆ ಇದ್ದು, ಜೊತೆಗೆ ಭಟ್ಕಳದಲ್ಲಿ ನೆಹರೂ ಕಾಲದಲ್ಲಿ ಇದ್ದ ಪ್ರಸ್ತಾವನೆಗೆ ಜೀವ ತುಂಬಿದ್ದೇವೆ. ಆದರೆ ಇಲ್ಲಿನ ಜನಸಂಖ್ಯೆಯ ಆಧಾರದ ಮೇಲೆ ಯಾರು ಸಹ ಬಂಡವಾಳಗಾರರು ಮುಂದೆ ಬರುತ್ತಿಲ್ಲ. ಶಾಂತವಾದ ಸ್ಥಳವನ್ನು ಆರಿಸಿಕೊಳ್ಳುವ ಬಂಡವಾಳಗಾರರು ಭಟ್ಕಳದ ಪರಿಸ್ಥಿತಿಗೆ ಅವರ ಬಂಡವಾಳದ ವಾಪಸ್ಸಾತಿಯ ಭರವಸೆ ಇಲ್ಲವಾಗಿದೆ. ಜ್ವಾಲಾಮುಖಿಯ ತುತ್ತ ತುದಿಯಲ್ಲಿ ಮನೆಯನ್ನು ಕಟ್ಟಲು ಹೇಗೆ ಸಾಧ್ಯ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದರು.
ಜಿಲ್ಲೆಯ ಹೊನ್ನಾವರದಲ್ಲಿ ಒಂದು ಪೋರ್ಟ್ ನಿರ್ಮಾಣವಾಗಿದರೇ ಭಟ್ಕಳದಿಂದ ಕುಮಟಾ ತನಕ ಒಂದು ನಗರವಾಗುವುದರೊಂದಿಗೆ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತಿತ್ತು. ಜಿಲ್ಲೆಯ ಜನರಿಗೆ ಒಂದು ಪೋರ್ಟ್ ಅಭಿವೃದ್ಧಿಯ ವ್ಯಾಪಕತೆಯ ಅರಿವಿಲ್ಲದೇ ಈ ಸೋಗಲಾಡಿ ಜನರು ಕಾಮಗಾರಿಗೆ ಅಡ್ಡಯಾಗಿ ಕಲ್ಲು ಹಾಕುತ್ತಿದ್ದಾರೆ ಎಂದು ಅನಂತ್ ಕುಮಾರ್ ಹೆಗಡೆ ಕಿಡಿಕಾರಿದರು.
ಬಂದರು, ಏರ್ಪೋರ್ಟ, ರೈಲ್ವೆ, ಟೆಲಿಕಾಂ, ಹೆದ್ದಾರಿಗಳ ಅಭಿವೃದ್ಧಿಗಳನ್ನು ಹೊರತು ಪಡಿಸಿ ಸಂಸದರು ಇನ್ನೇನು ಮಾಡಬೇಕು. ಇಡೀ ರಾಜ್ಯದಲ್ಲಿ ಸಂಸದರ ನಿಧಿ ಅತೀ ಹೆಚ್ಚು ಉತ್ತರ ಕನ್ನಡ ಕ್ಷೇತ್ರಕ್ಕೆ ತಂದಿದ್ದೇನೆ. ಕೇಂದ್ರ ಸರಕಾರದಿಂದ ಯಾವೆಲ್ಲ ಯೋಜನೆಗಳು, ಸೌಲಭ್ಯಗಳು ಕ್ಷೇತ್ರದಲ್ಲಿ ಆಗಿಲ್ಲ ಎಂಬುದನ್ನು ಯಾರಾದರು ಸಾಬೀತು ಪಡಿಸಲಿ ಎಂದು ಅನಂತ್ ಕುಮಾರ್ ಹೆಗಡೆ ಸವಾಲು ಹಾಕಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಾಗ ಗುರುತಿಸಬೇಕು : ಇನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತಾಗಿ ನನ್ನ ಬಳಿ ಚರ್ಚೆ ಬರುತ್ತಲಿದೆ. ಆದರೆ ಜಿಲ್ಲೆಯ ಜನರ ಗಮನಕ್ಕೆ ಈಗಾಗಲೇ ನಿಟ್ಟೆ ಎಂಬ ಸಂಸ್ಥೆ ಸಹ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದೆ ಬಂದಿದೆ. ಆದರೆ ಜಾಗವನ್ನು ರಾಜ್ಯ ಸರಕಾರ ಗುರುತಿಸಬೇಕಾಗಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೂ ಸಂಸದನಾಗಿ ನಾನು ಮನವಿ ಮಾಡಿದ್ದು, ಇಲ್ಲಿಯ ತನಕ ಜಾಗ ಹುಡುಕಲು ಸಾಧ್ಯವಾಗಿಲ್ಲ. ಬೆಂಗಳೂರಿಗಿಂತ ಹೆಚ್ಚಿನ ಜಾಗದ ಮೌಲ್ಯ ಜಿಲ್ಲೆಯಲ್ಲಿ ಅತೀ ಹೆಚ್ಚಿದೆ. ಕೆಲವರು ಆಸ್ಪತ್ರೆಯ ನಿರ್ಮಾಣ ಹೇಗೆ? ಎಲ್ಲಿ? ಯಾವ ರೀತಿ ಮಾಡಬೇಕೆಂಬ? ಕಲ್ಪನೆ ಇಲ್ಲದೇ ಎಲ್ಲರು ಮಾತನಾಡುವವರಾಗಿದ್ದಾರೆ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಭಟ್ಕಳದ ಶಾಸಕರಂತೆ ಹೋ ಎಂದು ಕೂಗುವುದು ಬಿಟ್ಟರೆ ಅವರಲ್ಲಿ ಆಸ್ಪತ್ರೆಯ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ ಎಂದರು.
ಸಿವಿಲ್ ಏರ್ಪೋರ್ಟ್ ನಿರ್ಮಾಣ : ಜಿಲ್ಲೆಯಲ್ಲಿ ಸಿವಿಲ್ ಏರ್ಪೋರ್ಟ್ ನಿರ್ಮಾಣಕ್ಕೆ 80 ಎಕರೆ ಜಾಗದ ಅವಶ್ಯಕತೆ ಇದೆ. ಅದಕ್ಕಾಗಿ ಕೇಂದ್ರದಿಂದ ಹಣವನ್ನು ಸಹ ರಾಜ್ಯ ಸರಕಾರಕ್ಕೆ ಈಗಾಗಲೇ ನೀಡಲಾಗಿದೆ. ಆದರೆ ಮತ್ತೆ ಹೆಚ್ಚುವರಿ ಜಾಗದ ಅವಶ್ಯಕತೆ ಇರುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದು ಅದಕ್ಕಾಗಿ 6 ಕೋಟಿ ರಾಜ್ಯ ಸರಕಾರ ಬಿಡುಗಡೆ ಮಾಡಿದರೆ ಏರ್ ಪೋರ್ಟ ಕಾಮಗಾರಿ ಆರಂಭವಾಗಲಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗಮನಕ್ಕೆ ಬರಲಾಗಿದ್ದು, ಇದಕ್ಕೆ ಸಹಮತ ನೀಡಿದ್ದರು ಸಹ ಯಾವ ಸಮಯದಲ್ಲಿ ಅವರು ತಲೆ ಹೇಗೆ ಬದಲಾಗುತ್ತದೆ ಎಂಬುದು ಗೊತ್ತಿಲ್ಲ. ಅಮಾವಾಸ್ಯೆ ಹುಣ್ಣಿಮೆಯನ್ನಾದರು ತಿಳಿಯಬಹುದು. ಆದರೆ ಗ್ರಹಣವು ಯಾವಾಗ ಬರುತ್ತದೆ ಎಂದು ತಿಳಿಯಲು ಅಸಾಧ್ಯ ಎಂದು ನುಡಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷ ದೆಹಲಿಯಿಂದ ಬೆಂಗಳೂರಿನವರೆಗೂ ಗೊಂದಲ ಮಯವಾಗಿದೆ: ವಿಜಯೇಂದ್ರ