ಭಟ್ಕಳ (ಉ.ಕ): ಇಲ್ಲಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಯಿಲಮುಡಿ ಕಡಲ ತೀರದಲ್ಲಿ ತಾಯಿ, ಮಗನ ಶವ ಪತ್ತೆಯಾಗಿದೆ. ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಹುಯಿಲಮುಡಿ ಬೀಚ್ನ ಬಂಡೆಗಳ ಬಳಿ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು ಬೆಂಗಳೂರು ಮೂಲದ ಮುತ್ಯಾಲ ನಗರ ಜೆ.ಪಿ ಪಾರ್ಕ್ ನಿವಾಸಿಗಳಾದ ಆದಿತ್ಯ ಬಿ.ಎನ್ ಹಾಗೂ ಲಕ್ಷ್ಮೀ ಬಿ ಎಂದು ಗುರುತಿಸಲಾಗಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಆಧಾರ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹರಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದಾಖಲೆ ಪರಿಶೀಲಿಸಿದಾಗ ಬೆಂಗಳೂರು ಮೂಲದ ತಾಯಿ, ಮಗ ಎಂದು ತಿಳಿದುಬಂದಿದೆ.
ತಾಯಿಯ ಮೃತದೇಹ ಬಂಡೆಯ ಮೇಲೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದರೆ, ಮಗನ ದೇಹ ಬಂಡೆಗಳ ನಡುವೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ತಾಯಿಯನ್ನ ಕೊಲೆಗೈದು ಬಳಿಕ ಮಗನೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇವರು ಬೆಂಗಳೂರಿನಿಂದ ಸೆ.14 ರಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಇಲ್ಲಿನ ಲಾಡ್ಜ್ನಲ್ಲಿ ತಂಗಿದ್ದು, ಸೆ.15 ರಂದು ಲಾಡ್ಜ್ನಿಂದ ಮರಳಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ್, ಗ್ರಾಮೀಣ ಠಾಣೆ ತನಿಖಾಧಿಕಾರಿ ರೇವತಿ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಮಗಳಿಗೆ ತೊಂದರೆ ಕೊಡ್ಬೇಡ ಎಂದು ಬುದ್ಧಿ ಹೇಳಿದ ಯುವತಿ ತಂದೆ ಮೇಲೆ ಮಾರಣಾಂತಿಕ ಹಲ್ಲೆ