ಶಿರಸಿ: ಕಾಂಗ್ರೆಸ್ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ 19 ದಿನಗಳ ರೆಸಾರ್ಟ್ ವಾಸ ಮುಗಿಸಿ ಅಚಾನಕ್ಕಾಗಿ ಸ್ವಕ್ಷೇತ್ರ ಯಲ್ಲಾಪುರದಲ್ಲಿ ಕಾಣಿಸಿಕೊಂಡರು. ಇದೇ ವೇಳೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಸಭೆ ನಡೆಸಿದರು. ಕ್ಷೇತ್ರದಲ್ಲೇ ಇದ್ದೇನೆ ಎಂಬಂತೆ ವಿವಿಧ ಅಧಿಕಾರಿಗಳನ್ನ ಕರೆದು ಜನರ ಸಮಸ್ಯೆ ಆಲಿಸಿ ಎಲ್ಲರ ಗಮನ ಸೆಳೆದರು.
ಉತ್ತರ ಕನ್ನಡದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಯಲ್ಲಾಪುರದ ಅವರ ನಿವಾಸಕ್ಕೆ ಆಗಮಿಸಿದರು. ಶಾಸಕರ ಆಗಮನದ ಸುದ್ದಿ ತಿಳಿದ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಅವರ ಕಚೇರಿಗೆ ದೌಡಾಯಿಸಿದರು. ನಂತರ ಯಲ್ಲಾಪುರ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಮುಖ್ಯವಾಗಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದು ತುರ್ತು ನಿರ್ವಹಣೆ ಮಾಡಲು ಸೂಚಿಸಿದರು.
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಾಸಕ ಹೆಬ್ಬಾರ್ ಕಾಣೆಯಾಗಿದ್ದು, ಹುಡುಕಿಕೊಡಬೇಕು ಎಂದು ದೂರು ದಾಖಲು ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಓಡನಾಟ ಹೊಂದಿರುವುದಾಗಿ ತಿಳಿಸಲು ಶಾಸಕ ಹೆಬ್ಬಾರ್ ಇರುವ ಅಲ್ಪ ಸಮಯದಲ್ಲೇ ಅಧಿಕಾರಿಗಳ ಸಭೆ ನಡೆಸಿದರು. ಇದರ ಜೊತೆಗೆ ಹಲವು ದಿನಗಳಿಂದ ನಾಪತ್ತೆಯಾಗಿ ದಿಢೀರ್ ಕ್ಷೇತ್ರದಲ್ಲಿ ಕಾಣಿಸಿಕೊಂಡ ಶಾಸಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.