ಶಿರಸಿ (ಉತ್ತರಕನ್ನಡ) : ಈ ಹಿಂದೆ ಬಿಜೆಪಿ ಸೇರಿದ ಶಾಸಕರು ಪುನಃ ಕಾಂಗ್ರೆಸ್‌ಗೆ ತೆರಳುತ್ತಾರೆ ಎಂಬ ಸುದ್ದಿಯನ್ನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ. ಮಾಧ್ಯಮದಲ್ಲಿ ಯಾಕೆ ಹೀಗೆ ಬಂದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆ ಟೀಮ್ ಕಾಂಗ್ರೆಸ್‌ಗೆ ತೆರಳುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಈ ಸಂಬಂಧ ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಆದರೂ ಈ ವಿಷಯ ಪ್ರಸ್ತಾಪವಾಗಿದೆ ಎಂದು ಹೇಳಿದರು.
ಅಂತಹ ಪರಿಸ್ಥಿತಿ ಬಂದರೆ ಕ್ಷೇತ್ರದ ಜನರನ್ನು ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ಅಂತಿಮವಾಗಿ ಅವರೇ ನಮ್ಮ ಹಣೆಬರಹ ಬರೆಯುತ್ತಾರೆ. ಅದು ಆವತ್ತಿರಬಹುದು, ಇವತ್ತು ಅಥವಾ ಮುಂದೇನೂ ಅಂತೆಯೇ ಇರುತ್ತದೆ. ಪ್ರಮುಖವಾದ ಯಾವುದೇ ನಿರ್ಣಯವನ್ನು ನಮ್ಮ ಕ್ಷೇತ್ರದಲ್ಲಿನ ಮುಖಂಡರೊಂದಿಗೆ ಚರ್ಚಿಸದೇ ಮಾಡಲು ಆಗುವುದಿಲ್ಲ ಎಂದರು. ನನಗೆ ಕಾಂಗ್ರೆಸ್ ಸೇರುವ ಕಾಲ ನಿರ್ಣಯ ಆಗಿಲ್ಲ. ಈ ಸಂಬಂಧ ಊಹಾಪೋಹಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಬರ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಹೆಬ್ಬಾರ್, ರಾಜ್ಯದ ಹಲವು ಜಿಲ್ಲೆಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಕಳೆದ ಒಂದು ತಿಂಗಳ ಹಿಂದಿನ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ತುಂಬಾ ಬದಲಾವಣೆ ಆಗಿದೆ. ಮಳೆಯಿಲ್ಲದೆ ತೊಂದರೆ ಅನುಭವಿಸುವ ಹಂತಕ್ಕೆ ಬಂದು ತಲುಪಿದ್ದೇವೆ. ಜೊತೆಗೆ ಕುಡಿಯುವ ನೀರಿಗೆ ಈಗಾಗಲೇ ತಾತ್ವಾರ ಎದುರಾಗಿದೆ ಎಂದರು.
ಕುಡಿಯುವ ನೀರಿಗೆ 1 ಕೋಟಿ ಪರಿಹಾರ ಘೋಷಿಸಬೇಕು: ಮಳೆ ಲೆಕ್ಕಾಚಾರ ಬಗ್ಗೆ ಈಗಾಗಲೇ ಸರ್ಕಾರದ ಬಳಿ ಮಾಹಿತಿ ಇದೆ. ವಿಧಾನಸೌಧದಲ್ಲೂ ಈ ಲೆಕ್ಕಾಚಾರವನ್ನು ಕೃಷಿ ಮಂತ್ರಿಗಳಿಗೆ ಕೊಟ್ಟಿದ್ದೇನೆ. ವಾಡಿಕೆಯ ಮಳೆಗಿಂತ ಶೇ. 62ರಷ್ಟು ಕಡಿಮೆ ಮಳೆಯಾಗಿದೆ. ಇದರಿಂದಾಗಿ ಅನೇಕ ರೈತರು ಬಿತ್ತಿದ ಬೆಳೆಗಳೆಲ್ಲ ಹಾನಿಯಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಬೆಳೆ ಹಾನಿ ಸಂಬಂಧ ಸೂಕ್ತ ಪರಿಹಾರ ನೀಡಬೇಕು. ರೈತರಿಗೆ ಮತ್ತೆ ಬೀಜಗಳ ಪೂರೈಕೆ ಆಗ್ಬೇಕು. ಕುಡಿಯುವ ನೀರಿನ ಬಗ್ಗೆ ಸರ್ಕಾರ ಕೂಡಲೇ ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂಪಾಯಿ ಕುಡಿಯುವ ನೀರಿನ ಪರಿಹಾರಕ್ಕಾಗಿ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ : ಮುಧೋಳ ಸರ್ಕಾರಿ ಆಸ್ಪತ್ರೆಗೆ ಸಚಿವ ತಿಮ್ಮಾಪೂರ ದಿಢೀರ್ ಭೇಟಿ, ಅವ್ಯವಸ್ಥೆ ಕಂಡು ವೈದ್ಯರು, ಸಿಬ್ಬಂದಿಗೆ ತರಾಟೆ