ಕಾರವಾರ: ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆ 'ಆಜಾದಿ ಕಾ ಅಮೃತ್ ಮಹೋತ್ಸವ್' ಪ್ರಯುಕ್ತ ಐಎನ್ಎಸ್ ಕದಂಬ ನೌಕಾನೆಲೆಯ ಸಿಬ್ಬಂದಿ ಶ್ರಮದಾನ, ರಕ್ತದಾನ ಸೇರಿದಂತೆ ಇನ್ನಿತರ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ಮರಣೀಯವಾಗಿಸಿದ್ದಾರೆ.
ಸ್ವಾತಂತ್ರ‍್ಯೋತ್ಸವದ ಸವಿನೆನಪಿಗಾಗಿ ತಾಲೂಕಿನ ಅರ್ಗಾದಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸರಣಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇಶದ ಅತೀ ದೊಡ್ಡ ವಿಮಾನ ವಾಹಕ ಐಎನ್‌ಎಸ್ ವಿಕ್ರಮಾದಿತ್ಯದ ಸಿಬ್ಬಂದಿ`ಮಿಷನ್ 75 ಎಂಬ 75 ಗಂಟೆಗಳ ಶ್ರಮದಾನ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ಮೂಲಕ ಕಾರವಾರದ ಆಶಾನಿಕೇತನ ಕಿವುಡ ಮಕ್ಕಳ ಶಾಲೆಯನ್ನು ಬಣ್ಣ ಬಳಿದು, ಆವರಣ ಸ್ವಚ್ಛಗೊಳಿಸಿ ಸುಂದರವಾಗಿಸಿದ್ದಾರೆ.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ ವಿಜೇತರ ಹೆಸರು ಗೊತ್ತಿಲ್ಲದವರು ಅಥ್ಲೆಟಿಕ್ಸ್ ಅಧ್ಯಕ್ಷರಾಗಿರೋದು ದುರಂತ: ಕಾಶಿನಾಥ ನಾಯ್ಕ
ಇದರ ಜೊತೆಗೆ ಭಾರತೀಯ ನೌಕಾಪಡೆಯ 75 ಸಿಬ್ಬಂದಿ ರಕ್ತದಾನ, 75 ಸಸಿಗಳ ನೆಡುತೋಪು, 75 ಸಿಬ್ಬಂದಿ 7.5 ಕಿಮೀ ಬೀಚ್ ಸ್ವಚ್ಛತೆ ಹಾಗೂ ಫಿಟ್ ಇಂಡಿಯಾ ಅಭಿಯಾನಕ್ಕೆ ಅನುಗುಣವಾಗಿ 750 ಸಿಬ್ಬಂದಿ 7.5 ಕಿಮೀ ಓಟದಲ್ಲಿ ಭಾಗವಹಿಸಿದ್ದಾರೆ ಎಂದು ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ.