ಕಾರವಾರ: ಇಲ್ಲಿನ ಕೂರ್ಮಗಡ ದ್ವೀಪಕ್ಕೆ ಪ್ರವಾಸಕ್ಕೆ ಬಂದು ರೆಸಾರ್ಟ್‌ನಲ್ಲಿ ತಂಗಿದ್ದ ಮಹಿಳೆಯೋರ್ವಳ 15 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ಉಂಗುರ ಮತ್ತು ಬಳೆ ಕಾಣೆಯಾಗಿದ್ದು ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಚೆನ್ನೈ ಮೂಲದ ನೀಕು ಹಿತೇಶ ಕನಾಡಿಯಾ ಆಭರಣ ಕಳೆದುಕೊಂಡು ದೂರು ದಾಖಲಿಸಿದ ಮಹಿಳೆ. ಕಾರವಾರ ನಗರದಿಂದ ಸುಮಾರು 10 ಕಿ.ಮೀ ದೂರದ ಸಮುದ್ರ ಮಧ್ಯದ ಕೂರ್ಮಗಡ ದ್ವೀಪಕ್ಕೆ ಪ್ರವಾಸ ಕೈಗೊಂಡಾಗ ಇಲ್ಲಿ ಸೈಂಟಾಕೋರ್ ರೆಸಾರ್ಟ್ ನಲ್ಲಿ ತಂಗಿದ್ದೆವು. ಆದರೆ ಅಂದು ಹೊರಗಡೆ ತೆರಳುವಾಗ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್ ಉಂಗುರ ಹಾಗೂ ಬಳೆ ಬ್ಯಾಗನಲ್ಲಿ ಇಟ್ಟಿದ್ದು ಮಾರನೇ ದಿನ ಕಾಣೆಯಾಗಿರುವುದು ಗೊತ್ತಾಗಿದೆ.
ತಕ್ಷಣ ರೆಸಾರ್ಟ್ ಮ್ಯಾನೇಜರ್ ಬಳಿ ತಿಳಿಸಿದಾಗ ತಾವು ಎಲ್ಲರನ್ನು ವಿಚಾರಿಸಿ ಹುಡುಕಿಕೊಡುವುದಾಗಿ ತಿಳಿಸಿದ್ದರು. ಅದರಂತೆ ತಾವು ವಾಪಸ್ ತೆರಳಿದ್ದು ಇದೀಗ ಮ್ಯಾನೇಜರ್ ಫೋನ್ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಆಭರಣವನ್ನು ಹುಡುಕಿಕೊಡುವಂತೆ ಮಹಿಳೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.