ಕಾರವಾರ : ಗೋಡಂಬಿ ಕೊಡುವುದಾಗಿ ಕರೆದೊಯ್ದ ದುಷ್ಕರ್ಮಿಗಳು, ಸುಮಾರು 28 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾದ ಘಟನೆ ಮುಂಡಗೋಡ ತಾಲೂಕಿನ ಮಳಗಿ ಪಂಚಾಯತ್ ವ್ಯಾಪ್ತಿಯ ಧರ್ಮಾ ಕಾಲೋನಿ ಸಮೀಪ ನಡೆದಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶಿವನಗೌಡ ಪಾಟೀಲ ತನ್ನ ಸ್ನೇಹಿತ ಅಸ್ಲಂ ನಧಾಪ್ ಜೊತೆ ಕಾರಿನಲ್ಲಿ ಮುಂಡಗೋಡಕ್ಕೆ ಬಂದಿದ್ದರು. ಈ ವೇಳೆ ಇವರನ್ನು ಭೇಟಿಯಾದ ವಂಚಕರ ತಂಡ, ಗೋಡಂಬಿ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನು ಧರ್ಮಾ ಕಾಲೋನಿ ಸಮೀಪ ಕರೆದುಕೊಂಡು ಹೋಗಿದೆ. ಆಗ ಮಾರ್ಗ ಮಧ್ಯೆ ಶಿವನಗೌಡ ಅವರ ಕೈಯಲ್ಲಿದ್ದ ಹಣದ ಬ್ಯಾಗ್ ಅನ್ನು ಕಸಿದುಕೊಂಡು ಧರ್ಮಾ ಜಲಾಶಯದ ಕೆಳಗಡೆ ಇಬ್ಬರು ವಂಚಕರು ಓಡಿ ಹೋಗಿದ್ದಾರೆ.
ಶಿವನಗೌಡ ಪಾಟೀಲ ಹಾಗೂ ಸ್ನೇಹಿತ ಅಸ್ಲಂ ಆರೋಪಿಗಳ ಬೆನ್ನು ಹತ್ತಿದರೂ, ಅಷ್ಟರಲ್ಲಿ ವಂಚಕರು ತಪ್ಪಿಸಿಕೊಂಡಿದ್ದಾರೆ.
ಓದಿ : ಪ್ರೀತ್ಸೆ ಪ್ರೀತ್ಸೆ ಅಂತಾ ಬಾಲಕಿಗೆ ಕಾಟ.. ಹುಬ್ಬಳ್ಳಿ ಯುವಕನ ಹುಚ್ಚಾಟಕ್ಕೆ ಕುಟುಂಬಸ್ಥರಿಂದಲೂ ಸಾಥ್!
ಘಟನಾ ಸ್ಥಳಕ್ಕೆ ಡಿಎಸ್ಪಿ ರವಿ ನಾಯ್ಕ್, ಪಿಐ ಪ್ರಭುಗೌಡ ಡಿ.ಕೆ, ಪಿಎಸ್‌ಐ ಬಸವರಾಜ ಮಬನೂರ, ಅಪರಾಧ ವಿಭಾಗದ ಪಿಎಸ್‌ಐ ಎನ್.ಡಿ. ಜಕ್ಕಣ್ಣವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬನವಾಸಿ ಪೊಲೀಸರ ತಂಡ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.
ಚಿಕ್ಕೋಡಿಯವರು ಇಷ್ಟು ದೊಡ್ಡ ಮೊತ್ತದ ಹಣ ಯಾಕೆ ತಂದಿದ್ದರು? ಹಳೆ ಬಂಗಾರದ ನಾಣ್ಯಗಳು ಖರೀದಿಸಲು ಬಂದಿದ್ದರೆ ಅಥವಾ ಗೋಡಂಬಿ ಖರೀದಿಸಲು ಬಂದಿದ್ದರೆ, ಇಲ್ಲಾ ಇನ್ನೇನಾದರು ಖರೀದಿಸಲು ಬಂದಿದ್ದರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.