ಕಾರವಾರ(ಉ.ಕ) : 3ನೇ ಹಂತದ ಕೋವಿಡ್ ವ್ಯಾಕ್ಸಿನ್ ವಿತರಣಾ ಕಾರ್ಯಕ್ರಮಕ್ಕೂ ಮೊದಲು ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗೋವಾದಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಶಿರಸಿಯಲ್ಲಿ ಉದ್ಘಾಟನೆಗೊಳ್ಳಲಿರುವ 3ನೇ ಹಂತದ ಲಸಿಕಾ ಕಾರ್ಯಕ್ರಮಕ್ಕೂ ಮೊದಲು ಮಹಾಬಲೇಶ್ವರ ದೇವಾಲಯಕ್ಕೆ ತೆರಳಿದರು. ಮಹಾಬಲೇಶ್ವರನಿಗೆ ಬಿಲ್ವಪತ್ರೆ, ಹೂವು ಅರ್ಪಿಸಿ ಆರತಿ ಬೆಳಗಿ ಬಳಿಕ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಜಿ ಕೆ ಹೆಗಡೆ ಅವರು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಮಹಾಬಲೇಶ್ವರನ ದರ್ಶನದ ಬಳಿಕ ಅಶೋಕೆಗೂ ಭೇಟಿ ನೀಡಿದ ಸಚಿವರು ಬಳಿಕ ಶಿರಸಿಗೆ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದರು.