ಶಿರಸಿ : ಯಾರೇ ಸಿಎಂ ಆದರೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಲ್ಲರನ್ನೂ ಸಮಾಧಾನ ಪಡೆಸಲು ಸಾಧ್ಯವಿಲ್ಲ. ಸಾಕಷ್ಟು ಅಳೆದು, ತೂಗಿ ಸಂಪುಟ ವಿಸ್ತರಣೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಎರಡನೇ ಬಾರಿ ಕಾರ್ಮಿಕ ಸಚಿವರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಚಿವರಾದ ಆನಂದ ಸಿಂಗ್, ಎಂಟಿಬಿ ನಾಗರಾಜ ಅವರು ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಬ್ಬರು ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು.
ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಹದಿಂದ ಸೇತುವೆಗಳಿಗೆ ಧಕ್ಕೆಯಾಗಿ 71 ಕೋಟಿ ರೂ. ನಷ್ಟವಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಣಶಿ ಘಟ್ಟ ಸಂಪೂರ್ಣ ಕುಸಿದಿದ್ದು, ವರ್ಷದವರೆಗೆ ಸಂಚಾರ ಸಾಧ್ಯವಿಲ್ಲ. ದೇವಿಮನೆ ಘಟ್ಟದಲ್ಲಿ ಬೃಹತ್ ವಾಹನ ಸಂಚಾರ ಕಷ್ಟಸಾಧ್ಯ. ಗ್ಯಾಸ್ ಟ್ಯಾಂಕರ್ ಸಾಗಣೆಗೆ ಅನುಕೂಲವಾಗಲು ಅರಬೈಲ್ ಘಟ್ಟದಲ್ಲಿ ಈಗಾಗಲೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.
ಓದಿ: ಎಂಟಿಬಿ, ಆನಂದ್ ಸಿಂಗ್ ರೆಬೆಲ್: ವಲಸಿಗರನ್ನೇ ದಾಳ ಮಾಡಿಕೊಂಡು ಅಸಮಾಧಾನ ಶಮನ ಮಾಡ್ತಾರಾ ಸಿಎಂ?
ಪ್ರವಾಹದಿಂದ ಅಂದಾಜು 790 ಕೋಟಿ ರೂ. ಜಿಲ್ಲೆಯಲ್ಲಿ ಹಾನಿಯಾಗಿದೆ. ಆ.12 ರೊಳಗೆ ಹಾನಿಯ ಸಂಪೂರ್ಣ ಸರ್ವೇ ಕಾರ್ಯ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಹಾನಿಯಾದ ಪ್ರದೇಶಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳು ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ನಿಲ್ಲಬೇಕು. ಕೇಂದ್ರ ಸರ್ಕಾರ ಕೂಡ ಸಹಕರಿಸಬೇಕು ಎಂದು ಹೇಳಿದರು.
ಕಾಗೇರಿ ಭೇಟಿ :
ದೇವಸ್ಥಾನದಿಂದ ನೇರವಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತೆರಳಿದ ಸಚಿವ ಹೆಬ್ಬಾರ್, ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ಕೆಲ ಕಾಲ ಆಪ್ತ ಸಮಾಲೋಚನೆ ನಡೆಸಿದರು. ನಂತರ ಕಾಗೇರಿ ಅವರು ಹೆಬ್ಬಾರ್ ಅವರಿಗೆ ಮಾಲಾರ್ಪಣೆ ಮಾಡಿ ಶುಭ ಕೋರಿದರು.
ಓದಿ: ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ, ಅಗತ್ಯವಿದ್ದರಷ್ಟೇ ದಿಲ್ಲಿಗೆ ಹೋಗುತ್ತೇನೆ: ಶಾಸಕ ರೇಣುಕಾಚಾರ್ಯ