ಕಾರವಾರ : ಮಹಾಮಾರಿ ಕೊರೊನಾದಿಂದ ದೇಶವೇ ಸಂದಿಗ್ಧತೆಗೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್, ಆಸ್ಪತ್ರೆಗಳ ಬಾಗಿಲು ಹಾಕದೆ ವೃತ್ತಿಪರತೆಯನ್ನು ಮೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ.
ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಬಂದಾಗಿವೆ. ಕೊರೊನಾ ಸೋಂಕಿತರು ಬಂದರೆ ಏನು ಮಾಡಬೇಕು ಎಂಬ ಆತಂಕ ಬಹುತೇಕ ವೈದ್ಯರನ್ನು ಕಾಡುತ್ತಿದೆ. ಆದರೆ, ಬಹುತೇಕ ವೈದ್ಯರು ಯಾವುದೇ ರೋಗಿಯನ್ನು ನೋಡಿದ ತಕ್ಷಣ ಆತನ ಕಾಯಿಲೆ ಏನು ಎಂದು ಕಂಡು ಹಿಡಿಯುವರಿದ್ದಾರೆ. ಆದ್ದರಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ವೃತ್ತಿಪರತೆಯನ್ನು ಮೆರೆಯಬೇಕು. ಒಂದೊಮ್ಮೆ ಯಾವುದೇ ರೋಗಿಗಳ ಬಗ್ಗೆ ಅನುಮಾನ ಬಂದಲ್ಲಿ ಅಂತವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಿ. ಆದರೆ, ಸಣ್ಣಪುಟ್ಟ ಕಾಯಿಲೆಗಳಿಗೂ ರೋಗಿಗಳು ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿರುವ ಕಾರಣ ಜನಸಂದಣಿ ಉಂಟಾಗುತ್ತಿದೆ ಎಂದರು.
ಖಾಸಗಿ ವೈದ್ಯರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಸೇರಿ ಯಾವುದೇ ಸೌಲತ್ತುಗಳ ಅವಶ್ಯವಿದ್ದರೆ ತಿಳಿಸಲಿ. ಅದನ್ನು ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ. ಅಲ್ಲದೇ ವೈದ್ಯರು ಜಿಲ್ಲೆಯ ಯಾವ ಭಾಗಗಳಿಗೆ ಬೇಕಾದರೂ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇಂತಹ ತುರ್ತು ಸಂದರ್ಭದಲ್ಲಿ ವೈದ್ಯರು ಮನೆಯಲ್ಲಿ ಕುಳಿತುಕೊಳ್ಳದೆ ಕಷ್ಟದಲ್ಲಿದ್ದವರಿಗೆ ನೆರವಾಗಬೇಕು. ಆ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆಯಬೇಕು. ಪವಿತ್ರವಾದ ವೃತ್ತಿಯನ್ನು ಜನರ ಸೇವೆಗೆ ಬಳಸಲು ಖಾಸಗಿ ವೈದ್ಯರು ಮುಂದೆ ಬರುವಂತೆ ಮನವಿ ಮಾಡಿದರು.