ಕಾರವಾರ: ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉತ್ತಮವಾಗಿ ನಡೆಯುತ್ತಿದ್ದು, ತಂತಿ ಮೇಲಿನ ನಡುಗೆ ಅನ್ನುವುದಕ್ಕಿಂತ ಎಲ್ಲರೂ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದೇನೆ ಎಂಬ ಹೇಳಿಕೆ ಸಮರ್ಥಿಸಿಕೊಂಡು ಪಕ್ಷದ ಎಲ್ಲ ಮುಖಂಡರು ಸೇರಿದಂತೆ ಅನರ್ಹ ಶಾಸಕರು ಚುನಾವಣೆಗೆ ಸಿದ್ದರಾಗುತ್ತಿದ್ದೇವೆ. ಬಿಜೆಪಿ ಹೈಕಮಾಂಡ್ ಸೂಚನೆಗೆ ಎಲ್ಲರೂ ಒಪ್ಪಿ ನಡೆಯುತ್ತಿದ್ದೇವೆ. ಇನ್ನು ಅನರ್ಹ ಶಾಸಕರ ಬಗ್ಗೆಯೂ ನಮ್ಮ ಪಕ್ಷದ ಹಿರಿಯರು ಯೋಗ್ಯವಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇನ್ನು ಉತ್ತರಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಬಾರದೇ ಇದ್ದರೂ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನೂರಾರು ಕೋಟಿ ಹಾನಿಯಾಗಿರುವ ಬಗ್ಗೆ ಈಗಾಗಲೇ ಎಲ್ಲ ಶಾಸಕರುಗಳಿಂದ ವರದಿ ತರಸಿಕೊಂಡಿದ್ದು, ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಪ್ರವಾಹ ಹಾನಿ, ಬೆಳೆ ಪರಿಹಾರ ಈ ಬಗ್ಗೆ ಸಂಪೂರ್ಣ ವರದಿಯನ್ನು ಕ್ಯಾಬಿನೆಟ್ ಸಬ್ ಕಮಿಟಿಗೆ ಒಪ್ಪಿಸಲಾಗುವುದು ಎಂದು ಹೇಳಿದರು.