ಕಾರವಾರ: ಗ್ಯಾರಂಟಿ ಯೋಜನೆಗಳು ಬಡವರಿಗೆ ಕೊಟ್ಟಿರುವ ಯೋಜನೆ. ಸರ್ಕಾರದ ಯಾವುದೇ ಕೆಲಸಕ್ಕೆ ಗ್ಯಾರಂಟಿ ಯೋಜನೆಗಳಿಂದ ವ್ಯತ್ಯಾಸವಾಗಲ್ಲ. ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ತಿರುಗೇಟು ನೀಡಿದರು.
ಕಾರವಾರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಹಾಳು ಮಾಡುತ್ತಿದ್ದಾರೆನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ 'ನಾವು ಗ್ಯಾರಂಟಿ ಕೊಟ್ಟದ್ದು ಬಡವರಿಗೆ. ಕುಮಾರಸ್ವಾಮಿ ಹೇಳಿದರು ಅಂತಾ ನಾವು ಯಾವುದೇ ಗ್ಯಾರೆಂಟಿ ಬಂದ್ ಮಾಡಲ್ಲ. ಗ್ಯಾರಂಟಿ ಯೋಜನೆಗೆ ಇಷ್ಟು ಹಣ ಬೇಕೆಂಬುದನ್ನು ಮೊದಲೇ ಲೆಕ್ಕಾಚಾರ ಹಾಕಿಯೇ ಘೋಷಣೆ ಮಾಡಲಾಗಿದೆ' ಎಂದರು.
ಕಾಂಗ್ರೆಸ್ ಹೈಕಮಾಂಡ್ ಭೇಟಿಯಲ್ಲಿ ರಾಜ್ಯದಿಂದ ₹ 250 ಕೋಟಿ ಬೇಡಿಕೆಯಿಟ್ಟಿದ್ದಾರೆ ಎಂ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು 'ಹೈಕಮಾಂಡ್ ನಮಗೆ ದುಡ್ಡು ಕೊಡಿ ಎಂದೂ ಕೇಳಿಲ್ಲ. ದುಡ್ಡು ಮಾಡಿ ಅಂತಾನೂ ಹೇಳಿಲ್ಲ. ಬಡವರ ಕೆಲಸ ಮಾಡಿ. ಬಡವರಿಗೆ ಬೇಕಾದ ಯೋಜನೆ ಜಾರಿ ಮಾಡಿ ಎಂದು ತಿಳಿಸಿದೆ. ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಪೆನ್‌ಡ್ರೈವ್ ತೋರಿಸಿ ತಿಂಗಳು ಕಳೆದಿದೆ. ಆದರೆ ಪೆನ್‌ಡ್ರೈವ್ ಹೊರಗೆ ಬರಲಿಲ್ಲ ಯಾಕೆ?, ಅದರಲ್ಲಿ ಅಂತಹ ವಿಚಾರವೇನಾದರು ಇದ್ದರೆ ಮೊದಲು ಬಹಿರಂಗಪಡಿಸಲಿ. ನಮ್ಮ ಸಚಿವ ಸಂಪುಟದಲ್ಲಿ ಅಂತವರು ಯಾರೂ ಇಲ್ಲ. ಇದ್ದರೇ ಅವರನ್ನು ಸಂಪುಟದಿಂದ ಮಾತ್ರವಲ್ಲ, ಪಕ್ಷದಿಂದಲೇ ಕಳುಹಿಸುತ್ತೇವೆ ಎಂದರು.
ಬಿಜೆಪಿ, ಜೆಡಿಎಸ್‌ನವರು ಹತಾಶರಾಗಿದ್ದಾರೆ: ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದು ಬಿಜೆಪಿ, ಜೆಡಿಎಸ್‌ನವರು ಟೀಕೆ ಮಾಡಿದ್ದರು. ಆದರೆ ಸರ್ಕಾರ ಬಂದ ಎರಡು ತಿಂಗಳಲ್ಲೇ ಯೋಜನೆಗಳು ಜಾರಿಯಾಗುತ್ತಿವೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಿಜೆಪಿ, ಜೆಡಿಎಸ್‌ನವರು ಹತಾಶರಾಗಿದ್ದಾರೆ ಎಂದರು.
ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರ ಮಾತನಾಡಿದ ಅವರು, ಪಕ್ಷದಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಗೆಲ್ಲಿಸಿಕೊಂಡು ಬರುತ್ತೇವೆ. ಅತೀ ಹೆಚ್ಚು ಸೀಟುಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ. ಯೋಜನೆಗಳ ಕುರಿತು ಟೀಕೆ ಮಾಡುವವರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಲಿ ಎಂದು ಸಚಿವರು ಸವಾಲು ಹಾಕಿದರು.
ಗೃಹಜ್ಯೋತಿ ಯೋಜನೆಗೆ ಚಾಲನೆ: ಇನ್ನು ಇದಕ್ಕೂ ಮೊದಲು ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಪ್ರತಿ ವರ್ಷಕ್ಕೆ 300 ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಲಿದೆ. ಇದು ಮಕ್ಕಳ ಶಿಕ್ಷಣ ಹಾಗೂ ಬಡ ಕುಟುಂಬಗಳ ನಿರ್ವಹಣೆಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ: ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಎಲ್ಲ ಗ್ಯಾರಂಟಿಗಳನ್ನು ಎರಡು ತಿಂಗಳಲ್ಲಿ ಈಡೇರಿಸಿದೆ. ಗೃಹಲಕ್ಷ್ಮಿ ಯೋಜನೆಗೆ ಇದೇ 16ಕ್ಕೆ ಚಾಲನೆ ಸಿಗಲಿದೆ. ಯುವನಿಧಿ ಯೋಜನೆಯನ್ನು ಈ ಹಿಂದೆ ತಿಳಿಸಿದಂತೆ 6 ತಿಂಗಳೊಳಗೆ ಜಾರಿ ಮಾಡಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ 3,26,978 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಈ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ. ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಪೂರಕ: ಶಾಸಕ ಭೀಮಣ್ಣ ಟಿ ನಾಯ್ಕ ಮಾತನಾಡಿ ಗೃಹಜ್ಯೋತಿಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಮ್ಮ ನಾಯಕರು ಹಳ್ಳಿಗಳಲ್ಲಿ ಕಣ್ಣಾರೆ ಕಂಡ ಕಷ್ಟಗಳನ್ನು ನೋಡಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಯೋಜನೆಗಳ ದಿಕ್ಕು ತಪ್ಪಿಸಲು ಕುಮಾರಸ್ವಾಮಿ ಮಾತಾಡ್ತಿದ್ದಾರೆ: ಸಚಿವ ಚಲುವರಾಯಸ್ವಾಮಿ