ಕಾರವಾರ: ರಸ್ತೆ ಇಲ್ಲದೆ ಮಕ್ಕಳ ಶಿಕ್ಷಣ, ಮದುವೆ, ಪೇಟೆ ಪಟ್ಟಣ ಸಂಪರ್ಕಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿರುವ ಕುಮಟಾ ತಾಲೂಕಿನ ಕುಗ್ರಾಮ ಮೇದನಿಗೆ ಜಿಲ್ಲಾ ಪಂಚಾಯತ್ ಸಿಇಓ ಖುದ್ದಾಗಿ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಜಿ. ಪಂ. ಸಾಮಾನ್ಯ ಸಭೆಯಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಪ್ರಸ್ತಾಪಿಸಿದ ಸದಸ್ಯ ಗಜಾನನ ಪೈ ಅವರು ಕುಮಟಾ-ಸಿದ್ದಾಪುರ ಮಧ್ಯದಲ್ಲಿರುವ ಕುಗ್ರಾಮ ಮೇದನಿ ಸಂಪೂರ್ಣ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 400 ಜನರಿದ್ದಾರೆ. ಇಲ್ಲಿ ರಸ್ತೆ ಇಲ್ಲದ ಕಾರಣಕ್ಕೆ ಅಲ್ಲಿನ ಯುವಕ-ಯುವತಿಯರಿಗೆ ಮದುವೆ ಸಹ ಆಗದ ಗಂಭೀರ ಸಮಸ್ಯೆ ಎದುರಾಗಿದೆ ಎಂದು ವಿವರಿಸಿದರು.
ಗ್ರಾಮದಲ್ಲಿ ರಾಜ-ಮಹಾರಾಜರು ಆಳಿದ ಕೋಟೆಯಿದ್ದು, ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ, ಆದರೆ ಸರಿಯಾದ ರಸ್ತೆ ಇಲ್ಲ, ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಹೆಚ್ಚಿನ ಗಮನ ಹರಿಸುವಂತೆ ಗಜಾನನ ಪೈ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಸಿಇಓ ಎಂ ರೋಶನ್ ಅವರು, ಮೇದನಿ ಗ್ರಾಮಕ್ಕೆ ನಾನೇ ಖುದ್ದಾಗಿ ಭೇಟಿ ನೀಡುತ್ತೇನೆ. ಕೋಟೆಗೆ ಪ್ರವಾಸಿಗರು ಬರುವುದಾದರೇ ಪ್ರವಾಸೊದ್ಯಮ ಅಭಿವೃದ್ಧಿ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ರು.