ಕಾರವಾರ: ಕಳೆದ ಎರಡು ವರ್ಷದಲ್ಲಿ ಮೃತಪಟ್ಟಿರುವ 45 ಮೀನುಗಾರರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ನೀಡಬೇಕಾದ ಪರಿಹಾರ ಹಣವನ್ನು ಹಿಂದಿನ ಸರ್ಕಾರ ನೀಡದೇ ಇರುವ ಬಗ್ಗೆ ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳು ವೈದ್ಯ, ಅಧಿಕಾರಿಗಳ ವಿರುದ್ಧ ಗರಂ ಆದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಅಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಚಿವರು ಕಳೆದ ಎರಡು ವರ್ಷದಲ್ಲಿ ಎಷ್ಟು ಮೀನುಗಾರರು ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದರು.
ಇದಕ್ಕೆ ಉತ್ತರಿಸಿದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಜಿಲ್ಲೆಯಲ್ಲಿ ಒಟ್ಟು 45 ಮೀನುಗಾರರು ಮೃತಪಟ್ಟಿದ್ದಾರೆ ಎಂದರು. ಇದರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಇದುವರೆಗೆ ಯಾವ ಒಂದು ಕುಟುಂಬಕ್ಕೂ ಪರಿಹಾರ ನೀಡಲ್ಲ ಎಂದು ಮಾಹಿತಿ ನೀಡಿದರು. ಯಾಕೆ ಎರಡು ವರ್ಷವಾದರೂ ಹಣ ಕೊಟ್ಟಿಲ್ಲ, ಏನಾಗಿದೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು. ಸಚಿವರು ಗರಂ ಆದ ಬಳಿಕ ಮಾಹಿತಿ ನೀಡಿದ ಅಧಿಕಾರಿಗಳು, ಸರ್ಕಾರ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ, ಹೀಗಾಗಿ ನಾವು ಕೊಟ್ಟಿಲ್ಲ ಎಂದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅನಾಹುತದಲ್ಲಿ ಮೃತಪಟ್ಟ ಕುಟುಂಬಗಳಿಗೆ 24 ಗಂಟೆಗಳ ಅವಧಿಯಲ್ಲಿ ಪರಿಹಾರ ಹಣ ನೀಡುತ್ತಿದ್ದೆವು. ಆದರೆ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಎರಡು ವರ್ಷವಾದರೂ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದರೆ ಏನರ್ಥ?. ಮೃತರ ಕುಟುಂಬಕ್ಕೆ ಅನುಕೂಲ ಆಗಲಿ ಎಂದು ಪರಿಹಾರ ಘೋಷಣೆ ಮಾಡಿದ್ದರೆ, ಅದನ್ನೂ ಸಹ ಆ ಸರ್ಕಾರ ಮಾಡೋದಕ್ಕೆ ಸಾಧ್ಯವಾಗಿಲ್ಲ. ಅಂದರೆ ಆ ಕುಟುಂಬ ಹೊಟ್ಟೆಗೆ ಏನು ತಿನ್ನಬೇಕು, ನಿಜಕ್ಕೂ ಮೃತ ಕುಟುಂಬಕ್ಕೆ ಇದುವರೆಗೆ ಹಣ ನೀಡದೇ ಇರುವುದು ದುರಂತ ಎಂದು ಅಸಮಾಧಾನ ಹೊರಹಾಕಿ, ತಕ್ಷಣ ಆ ಎಲ್ಲ ಮೃತರ ಕುಟುಂಬಕ್ಕೆ ಪರಿಹಾರದ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಮೀನುಗಾರಿಕಾ ಇಲಾಖೆ ಮಾತ್ರವಲ್ಲದೆ ಎಲ್ಲ ಇಲಾಖೆಯಲ್ಲಿಯೂ ಹಣ ಇಲ್ಲದಂತಾಗಿದೆ. 40 ಪರ್ಸೆಂಟ್ ಕಮಿಷನ್ಗಾಗಿ ಬಿಜೆಪಿಯವರು ಎಲ್ಲವನ್ನೂ ದೋಚಿದ್ದಾರೆ. ಇದು ಕೇವಲ ನಾನು ಹೇಳುತ್ತಿಲ್ಲ. ಎಲ್ಲ ಮಾಧ್ಯಮಗಳಲ್ಲಿಯೂ ಬಂದಿದೆ ಎಂದರು.
ಎರಡು ವರ್ಷದಿಂದ ಮೀನುಗಾರರ ಸಾವಿಗೆ ನೀಡಬೇಕಿದ್ದ ಪರಿಹಾರದ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹಣ ಇಲ್ಲದ ಕಾರಣಕ್ಕೆ ಬಾಕಿ ಉಳಸಿಕೊಂಡಿದ್ದಾರೆ. ಆದರೆ ಇದೀಗ ನಮ್ಮ ಸರ್ಕಾರ ಬಂದಿದೆ. ಮುಖ್ಯಮಂತ್ರಿಯವರು ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲತ್ತು ತಲುಪುವಂತೆ ನೋಡಿಕೊಳ್ಳಲಿದ್ದಾರೆ. ಹಂತ ಹಂತವಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಶಕ್ತಿ ಯೋಜನೆಯಿಂದ ಹೊರಗುಳಿದ ಚಿಗರಿ: ಹು-ಧಾ ಮಹಿಳೆಯರಿಗೆ ಎಸಿ ಬಸ್ ಪ್ರಯಾಣ ಭಾಗ್ಯವಿಲ್ಲ