ಕಾರವಾರ : ಸೀಬರ್ಡ್ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ವಂಚನೆಗೊಳಗಾದವರೇ ಹಿಡಿದು, ಹಣ ಮರಳಿಸುವಂತೆ ತರಾಟೆ ತೆಗೆದುಕೊಂಡಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಆರ್ಗಾದ ನಿವಾಸಿ ನಿಲೇಶ್ ಎಂಬಾತ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಅನೇಕ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ. ಸುಮಾರು 20ಕ್ಕೂ ಅಧಿಕ ಮಂದಿಯಿಂದ ಉದ್ಯೋಗ ಕೊಡಿಸುವುದಾಗಿ 50-60 ಸಾವಿರ ಹಣ ಪಡೆದುಕೊಂಡಿದ್ದನಂತೆ.
ಅಷ್ಟೆ ಅಲ್ಲದೇ, ಉದ್ಯೋಗ ಸಿಕ್ಕಿದೆ ಎಂದು ಹೇಳಿ ಒಂದಿಷ್ಟು ಮಂದಿಗೆ ನೌಕಾಸೇನೆಯ ಹೆಸರಿನಲ್ಲಿ ನಕಲಿ ನೇಮಕಾತಿ ಪತ್ರವನ್ನೂ ಸಹ ಈತ ನೀಡಿದ್ದ ಎನ್ನಲಾಗಿದೆ. ಹಣ ಕೊಟ್ಟು ಅತ್ತ ಉದ್ಯೋಗವೂ ಇಲ್ಲದೇ, ಇತ್ತ ಕೊಟ್ಟ ಹಣ ವಾಪಸ್ ಇಲ್ಲದೆ ಪರದಾಡುತ್ತಿದ್ದವರು, ವಂಚನೆ ಮಾಡಿದ ನಿಲೇಶನನ್ನು ನಗರಕ್ಕೆ ಕರೆಸಿಕೊಂಡು, ಕೊಟ್ಟಿರುವ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಕೇವಲ ಉದ್ಯೋಗ ನೀಡುವುದಾಗಿ ವಂಚನೆಯಷ್ಟೇ ಅಲ್ಲ, ಕೆಲವರಿಂದ ಕಾರನ್ನೂ ತಿಂಗಳ ಬಾಡಿಗೆಗೆ ಪಡೆದು ಬಾಡಿಗೆ ಹಣವನ್ನೂ ಸಹ ನೀಡದೆ ವಂಚನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸುಲ್ಲಿ ಡೀಲ್ಸ್ 'ಹರಾಜು' ಆ್ಯಪ್ ಸೃಷ್ಟಿಕರ್ತನ ಬಂಧಿಸಿದ ದೆಹಲಿ ವಿಶೇಷ ಪೊಲೀಸ್