ಕಾರವಾರ : ಹವಾಮಾನ ವೈಪರೀತ್ಯದಿಂದಾಗಿ ಲಕ್ಷದ್ವೀಪದಲ್ಲಿ ಅಳವಡಿಸಿದ್ದ ಸಾಗರ ಹವಾಮಾನ ಸಂಶೋಧನಾ ಯಂತ್ರವೊಂದು ಕಣ್ಮರೆಯಾಗಿತ್ತು. ಕೊನೆಗೂ ಅದು ಸುಮಾರು ಏಳುನೂರು ಕಿ.ಮೀ ದೂರದಲ್ಲಿ ಮೀನುಗಾರರಿಗೆ ಪತ್ತೆಯಾಗಿದೆ.
ಲಕ್ಷದ್ವೀಪದಲ್ಲಿ ಅಳವಡಿಸಲಾಗಿದ್ದ ಸಾಗರ ಹವಾಮಾನದ ಮುನ್ಸೂಚನೆ ಸೇರಿ ಇತರೆ ವರದಿಗಳನ್ನು ನೀಡುವ ದೇಶದ ಅತ್ಯಾಧುನಿಕ ಯಂತ್ರ ಹವಾಮಾನ ವೈಪರೀತ್ಯದಿಂದಾಗಿ ಅಕ್ಟೋಬರ್ 3ರಂದು ಕಳಚಿಕೊಂಡು ಕಣ್ಮರೆಯಾಗಿತ್ತು. ಅದು ಕೇರಳದಲ್ಲಿ ಅ. 5ರಂದು ಕಾಣಿಸಿಕೊಂಡಿತ್ತಾದರೂ ಯಾರೊಬ್ಬರನ್ನು ಹಿಡಿದಿಟ್ಟುಕೊಂಡಿರಲಿಲ್ಲ.
ಆದರೆ, ಈ ಬಗ್ಗೆ ಮೀನುಗಾರರಿಗೆ ಯಂತ್ರದ ಫೋಟೋ ಹಾಗೂ ಅದರ ಆಕಾರದ ಬಗ್ಗೆ ಮಾಹಿತಿ ನೀಡಿ ಎಲ್ಲಾದರೂ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಕೋರಲಾಗಿತ್ತು. ಅದರಂತೆ ಯಂತ್ರವೂ ಮಹಾರಾಷ್ಟ್ರದ ಬಳಿ ಜಿಲ್ಲೆಯ ಮೀನುಗಾರರಿಗೆ ಕಾಣಿಸಿಕೊಂಡಿದೆ.
ಗಾಳಿ ಹಾಗೂ ಸಮುದ್ರ ಅಲೆಗಳಿಗೆ ಸುಮಾರು 700 ಕಿ.ಮೀ ದೂರ ಕ್ರಮಿಸಿದೆ. ಈ ಬಗ್ಗೆ ಮೀನುಗಾರರು ಕಾರವಾರ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಯಂತ್ರವನ್ನು ಮೀನುಗಾರರ ಬೋಟ್ ಸಹಾಯದಲ್ಲಿ ತರಲಾಗಿದೆ.
ಈ ಯಂತ್ರ ಸಮುದ್ರದಲ್ಲಿ ಆಗುವ ಬದಲಾವಣೆಗಳ ಬಗ್ಗೆ, ಗಾಳಿಯ ವೇಗ, ದಿಕ್ಕು ಹಾಗೂ ಮಳೆಗಳ ಬಗ್ಗೆ ಮುನ್ಸೂಚನೆ ಅರಿಯಲು ಸಹಾಯಕವಾಗಿದೆ. ಇದೀಗ ಮೀನುಗಾರರು ಯಂತ್ರವನ್ನು ಪತ್ತೆಹಚ್ಚಿ ಮಾಹಿತಿ ನೀಡಿದ್ದು, ಅದನ್ನು ತರಲಾಗಿದೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಜಗನ್ನಾಥ ರಾಥೋಡ್ ತಿಳಿಸಿದ್ದಾರೆ.
ಓದಿ: 'ಉದಾಸಿಯವರು ಡಿಕೆಶಿಗೆ ವಿಲ್ ಬರೆದು ಕೊಟ್ಟಿದ್ದಾರಾ?': ಬಿಸಿಪಾ ಪ್ರಶ್ನೆ