ಕಾರವಾರ: ಕೊರೊನಾ ತಡೆಗೆ ಎರಡನೇ ಹಂತದ ಲಾಕ್ಡೌನ್ ವೇಳೆಯೂ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಉತ್ತರಕನ್ನಡ ಜಿಲ್ಲಾಡಳಿತ ಇದೀಗ ಗಡಿದಾಟುವ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲು ಮುಂದಾಗಿದೆ.
ಜಿಲ್ಲೆಯಲ್ಲಿ ತಿಂಗಳ ಹಿಂದೆ ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದವರಿಗೆ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಬಳಿಕ ಅವರ ಸಂಪರ್ಕಕ್ಕೆ ಬಂದವರಿಗೂ ಹಬ್ಬತೊಡಗಿತ್ತು. ಆದರೆ, ಅಷ್ಟರಲ್ಲಾಗಲೇ ಸೋಂಕಿನ ಮುನ್ಸೂಚನೆ ಅರಿತಿದ್ದ ಉತ್ತರಕನ್ನಡ ಜಿಲ್ಲಾಡಳಿತ ಮೊದಲು ಸಾಮಾಜಿಕ ಅಂತರಕ್ಕೆ ಪ್ರಾಶಸ್ತ್ಯ ನೀಡಿತ್ತು. ಜನರು ಮನೆಯಿಂದ ಹೊರ ಬರದಂತೆ ತಡೆಯಲು ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿತ್ತು. ಇದರಿಂದ ಜಿಲ್ಲೆಯ ಭಟ್ಕಳದಲ್ಲಿ ಕಾಣಿಸಿಕೊಂಡಿದ್ದ ಸೋಂಕಿತರ ಸಂಖ್ಯೆ 9ಕ್ಕೆ ಸೀಮಿತವಾಗಿತ್ತು. ಇದೀಗ ಮಂಗಳೂರಿನಲ್ಲಿ ದಾಖಲಾಗಿದ್ದ ಭಟ್ಕಳ ಮೂಲದ ವ್ಯಕ್ತಿ ಸೇರಿ ಒಟ್ಟು ಎಂಟು ಜನರು ಗುಣಮುಖರಾಗಿದ್ದಾರೆ.
ಮೇ 3 ರವರೆಗೆ ಎರಡನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಸೂಚಿಸಿದ್ದಾರೆ. ಅದರಂತೆ ಉತ್ತರಕನ್ನಡ ಜಿಲ್ಲಾಡಳಿತ ಎರಡನೇ ಹಂತಕ್ಕೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಕೃಷಿ, ಮೀನುಗಾರಿಕೆ, ಕೈಗಾರಿಕೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲು ಅನುಮತಿ ನೀಡಿದ್ದು ಅನಗತ್ಯವಾಗಿ ಓಡಾಡುವುದಕ್ಕೆ ಸಂಪೂರ್ಣ ನಿರ್ಬಂಧವಿದೆ. ಹೊರ ರಾಜ್ಯ ಅಥವಾ ಜಿಲ್ಲೆಯಿಂದ ಬರುವವರು ಅನುಮತಿ ಪಡೆದರೂ ಕೂಡ ಕ್ವಾರಂಟೈನ್ ಇರಬೇಕಾಗುತ್ತದೆ.
ಇನ್ನು ಜಿಲ್ಲೆಯಲ್ಲಿ ಅವಶ್ಯಕತೆ ಇದ್ದು ತೆರಳುವವರಿಗೆ ಜಿಲ್ಲಾಡಳಿತದ ಮೂಲಕ ತಹಶೀಲ್ದಾರ್, ಪಿಡಿಒ ಹಾಗೂ ಪೊಲೀಸರು ಪಾಸ್ ನೀಡಲಿದ್ದಾರೆ. ಆದರೆ, ಮೆಡಿಕಲ್ ಎಮರ್ಜೆನ್ಸಿ ಇನ್ನಿತರ ಅವಶ್ಯಕತೆ ಹೊರತುಪಡಿಸಿ ಯಾರೂ ಕೂಡ ಓಡಾಡಬಾರದು. ಒಂದೊಮ್ಮೆ ಓಡಾಡಿದರೆ ಅಂತವರ ವಾಹನ ಸೀಜ್ ಮಾಡುವುದರ ಜೊತೆ ಅವರನ್ನು ಹೋಂ ಕ್ವಾರಂಟೈನಲ್ಲಿ ಇರಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಸಿದ್ದಾರೆ.