ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಾತ್ರೆ ಪ್ರಯುಕ್ತ ಬೀಡು ಬಿಟ್ಟಿದ್ದ ನಾಟಕ ಕಂಪನಿಗಳು ಭಾರತ ಲಾಕ್ ಡೌನ್ ನಿಂದಾಗಿಸಂಕಷ್ಟಕ್ಕೊಳಗಾಗಿದ್ದು, ಒಪ್ಪತ್ತು ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ.
ಕಳೆದ ಹದಿನೈದು ದಿನದಿಂದ ಶಿರಸಿ ನಗರದಲ್ಲಿ ಐದು ವೃತ್ತಿ ರಂಗಭೂಮಿಯ ಕಂಪನಿಗಳು ಬೀಡುಬಿಟ್ಟಿವೆ. ಪ್ರತಿ ಕಂಪನಿಯಲ್ಲಿ ಮೂವತ್ತರಿಂದ ನಲವತ್ತು ಜನರು ಕಲಾವಿದರು ಹಾಗೂ ತಂತ್ರಜ್ಞರಿದ್ದಾರೆ. ಲಾಕ್ಡೌನ್ನಿಂದಾಗಿ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಕಂಪನಿ ಕಲಾವಿದರು ಊಟ ಮಾಡಲು ಸಹ ಹಣವಿಲ್ಲದೇ ಸರ್ಕಾರದ ಸಹಾಯ ಹಸ್ತ ಬೇಡಿದ್ದಾರೆ.
ಈ ಸಂಬಂಧ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ್ ತಮ್ಮ ಸಮಸ್ಯೆ ಕುರಿತು ಸೆಲ್ಫಿ ವಿಡಿಯೋ ಮಾಡಿ ಶಿರಸಿ ಶಾಸಕ ,ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಸಿ. ಟಿ ರವಿ ಅವರಿಗೆ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.