ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವ ಸಂಬಂಧ ಖಾಲಿ ಇರುವ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಪೈಕಿ ಅಂಕೋಲಾ ತಾಲೂಕಿನ ಬೆಳಂಬಾರ, ಕಾರವಾರ ತಾಲೂಕಿನ ತೋಡೂರು, ಹೊಟೆಗಾಳಿ, ಉಳಗಾ, ಹೊನ್ನಾವರ ತಾಲೂಕಿನ ಸಾಲಕೋಡ, ಜೋಯಿಡಾ ತಾಲೂಕಿನ ಜಗಲಪೇಟ, ಗಾಂಗೋಡಾ, ಸಿದ್ದಾಪುರ ತಾಲೂಕಿನ ಕೋರ್ಲಕೈ (ಆಡುಕಟ್ಟಾ), ತಂಡಾಗುಂಡಿ, ಹೊನ್ನಾವರ ತಾಲೂಕಿನ ಮಂಕಿ ಬಿ (ಅನಂತವಾಡಿ) ಮಂಕಿ ಸಿ (ಚಿತ್ತಾರ) ಮಾಗೋಡ, ಶಿರಸಿ ತಾಲೂಕಿನ ಮಂಜಗುಣಿ, ಮೇಲಿನ ಓಣಿಕೇರಿ, ಸೋಂದಾ, ಹಳಿಯಾಳ ತಾಲೂಕಿನ ಮೊದಲಗೇರಾ, ತಟ್ಟಿಗೇರಿ, ಮುಂಡಗೋಡ ತಾಲೂಕಿನ ನಾಗನೂರು, ಓಣಿಕೇರಿ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಮೀಸಲಾತಿ ಮತ್ತು ಸಮತಳ ಮೀಸಲಾತಿ ವಿವರಗಳನ್ನು ಆಯಾ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಡೆದುಕೊಳ್ಳುವುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸೆ. 30ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಆಸಕ್ತ ಅಭ್ಯರ್ಥಿಯು ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿಯುಸಿ)ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ನಲ್ಲಿ ಪ್ರಮಾಣಪತ್ರ ಪಡೆದಿರತಕ್ಕದ್ದು ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು.
ನಿಗದಿಪಡಿಸಲಾದ ಮೀಸಲಾತಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ನೀಡಿದ ದೃಢೀಕರಣ ಪತ್ರ, ಭರ್ತಿ ಮಾಡಿದ ಅರ್ಜಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಮೀಸಲಾತಿ ಪ್ರಮಾಣ ಪತ್ರ, ಅಂಗವಿಕಲತೆ ಇದ್ದಲ್ಲಿ ದೃಢೀಕರಣ ಪ್ರಮಾಣ ಪತ್ರ ಹಾಗೂ ಇನ್ನಿತರ ವಿದ್ಯಾರ್ಹತೆ ದಾಖಲೆ ಸಲ್ಲಿಸುವುದು.
ವಯೋಮಿತಿ ಕನಿಷ್ಠ 18 ವರ್ಷಗಳು, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಹೊಂದಿರಬೇಕು. ವಿಧವೆಯರು, ಮಾಜಿ ಸೈನಿಕರು ಮುಂತಾದ ವರ್ಗದವರಿಗೆ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸುವ ಗರಿಷ್ಠ ವಯೋಮಿತಿಯನ್ನು ಕಲ್ಪಿಸಲಾಗುವುದು.
ಬೆಳಂಬಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳು ಯಾರು ಇಲ್ಲವಾದಲ್ಲಿ ಸರ್ಕಾರದ ಆದೇಶದಂತೆ ಅದೇ ತಾಲೂಕಿನ ಬೇರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ, ಗ್ರಾ. ಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಮೇಲ್ವಿಚಾರಕರ ನೇಮಕಾತಿ ಸಮಿತಿ ಅವರ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: SSC Recruitment: 7547 ಕಾನ್ಸ್ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ