ಭಟ್ಕಳ: ಭಟ್ಕಳ ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಅರುಕಿ ರೋಡ್ನಲ್ಲಿ ಚಿರತೆಯೊಂದರ ಶವ ಪತ್ತೆಯಾಗಿದೆ.
ಸುಮಾರು ಹತ್ತು ವರ್ಷ ವಯಸ್ಸಿನ ಚಿರತೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಿರತೆಯ ಬಾಲಕ್ಕೆ ವಿದ್ಯುತ್ ತಂತಿ ತಗುಲಿರುವ ಗುರುತು ಪತ್ತೆಯಾಗಿದ್ದು, ಎತ್ತರದ ಪ್ರದೇಶದಿಂದ ಧುಮುಕುವ ವೇಳೆ ವಿದ್ಯುತ್ ತಂತಿಯ ಶಾಕ್ ತಗುಲಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮೃತ ಚಿರತೆಯ ಉಗುರುಗಳು ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದು ನಿಜಕ್ಕೂ ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಉಗುರುಗಳಿಗೋಸ್ಕರ ಉದ್ದೇಶಪೂರ್ವಕವಾಗಿ ಚಿರತೆಯನ್ನು ಹತ್ಯೆ ಮಾಡಲಾಗಿದೆಯೋ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಬಂದರು ಕಾಮಗಾರಿ ಪ್ರದೇಶದ ಬಳಿ ನೂರಾರು ಮೊಟ್ಟೆ ಇಟ್ಟ ಕಡಲಾಮೆ
ಪಶುವೈದ್ಯ ಮಿಥುನ ರಾಜ್ ಅವರು ಘಟನಾ ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಚಿರತೆಯ ದೇಹದ ಕೆಲ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಎಸಿಎಫ್ ಬಾಲಚಂದ್ರ, ಆರ್‌ಎಫ್‌ಒ ಸವಿತಾ ದೇವಾಡಿಗ ಮತ್ತು ಅರಣ್ಯ ಇಲಾಖೆಯ ಇತರ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.