ಕಾರವಾರ: ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.
ಮಾಸ್ತಿಕಟ್ಟಾ ವ್ಯಾಪ್ತಿಯಲ್ಲಿ ದಟ್ಟ ಅರಣ್ಯ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಓಡಾಟ ಸಾಮಾನ್ಯವಾಗಿದೆ. ಅದರಂತೆ ಮಾಸ್ತಿಕಟ್ಟಾದ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ ವೇಳೆ ಚಿರತೆಯೊಂದು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸಿದ್ದು, ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಚಿರತೆಗೆ ಗುದ್ದಿದೆ. ಅಪಘಾತದಿಂದಾಗಿ ಚಿರತೆಯ ಸೊಂಟದ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಅದು ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯ ಮಾಹಿತಿ ಪಡೆದ ಎಸಿಎಫ್ ಮಂಜುನಾಥ ನಾವಿ ಹಾಗೂ ಆರ್‌ಎಫ್‌ಓ ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಕಾರ್ಯ ನಡೆಸಿದ್ದಾರೆ. ಬಳಿಕ ಪಶು ವೈದ್ಯಾಧಿಕಾರಿ ಚಂದನ್ ಅವರು ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅಪಘಾತದ ತೀವ್ರತೆಗೆ ಚಿರತೆಯ ದೇಹದೊಳಗೆ ರಕ್ತ ಸ್ರಾವವಾಗಿ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಓದಿ;ಜಾಹಿರಾತು ನೋಡಿ ಜ್ಯೋತಿಷಿಗೆ ಕರೆ ಮಾಡಿ, ಹಣದ ಜೊತೆಗೆ ಚಿನ್ನವನ್ನು ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್!
ಈ ಕುರಿತು ಅಂಕೋಲಾ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಚಿರತೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.