ಕಾರವಾರ: ಮನೆಯಂಗಳದಲ್ಲಿ ಕಟ್ಟಿದ್ದ ನಾಯಿ ಹಿಡಿಯಲು ಚಿರತೆಯೊಂದು ವಿಫಲ ಯತ್ನ ನಡೆಸಿರುವ ಘಟನೆ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಗಣಪು ಪಿ ಹೆಗಡೆ ಎನ್ನುವವರ ಮನೆಯ ಅಂಗಳದಲ್ಲಿ ಕಟ್ಟಿದ್ದ ನಾಯಿ ಹಿಡಿಯುವುದಕ್ಕೆ ಶನಿವಾರ ಮುಂಜಾನೆ ನಿಧಾನವಾಗಿ ಹೆಜ್ಜೆ ಹಾಕಿ ಬಂದಿದ್ದ ಚಿರತೆ ದಾಳಿ ಮಾಡಿದೆ. ಆದರೆ ನಾಯಿ ಕೂಗಿಕೊಂಡು ತಪ್ಪಿಸಿಕೊಳ್ಳುವಾಗ ನಾಯಿ ಹಾಗೂ ಚಿರತೆ ಎರಡು ಕೂಡ ಕಟ್ಟೆಯ ಮೇಲಿಂದ ಕೆಳಗೆ ಬಿದ್ದಿದೆ. ಈ ವೇಳೆ ಬೇಟೆ ತಪ್ಪಿದ ಹಿನ್ನೆಲೆಯಲ್ಲಿ ನಾಯಿ ಕೂಗಾಡಿದ್ದು ಇದೇ ಸಮಯಕ್ಕೆ ಮನೆಯವರು ಲೈಟ್ ಆನ್ ಮಾಡಿದ್ದಾರೆ. ತಕ್ಷಣ ಚಿರತೆ ಅಲ್ಲಿಂದ ಓಡಿ ಹೋಗಿದೆ.
ಇತ್ತೀಚಿನ ದಿನದಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಹೊಸಾಕುಳಿ, ಸಾಲ್ಕೋಡ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಕಲ್ಪಿಸಿದ್ದರೂ, ಬೋನ್ ಒಳಗೆ ಚಿರತೆ ಹೋಗದೆ ತಪ್ಪಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು ಚಿರತೆ ದಾಳಿ ತಪ್ಪಿಸಲು ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಚಿರತೆ ದಾಳಿಗೆ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ಪರಿಹಾರ: ಸಿಎಂ ಬೊಮ್ಮಾಯಿ